ಈಜಿಪ್ಟ್‌ನ ಜೀವನಾಡಿಯಾದ ನೈಲ್ ನದಿಗೆ ಪ್ರತಿ ವರ್ಷ ಮಳೆಗಾಲದಲ್ಲಿ ಭೀಕರ ಪ್ರವಾಹ ಬರುತ್ತಿತ್ತು. ಇದನ್ನು ಗಮನಿಸಿದ್ದ ಇರಾಕ್‌ನ ಬಸ್ರಾ ನಗರದಲ್ಲಿದ್ದ ಯುವ ಗಣಿತಜ್ಞ ಮತ್ತು ಜಲ ತಂತ್ರಜ್ಞ "ಇಬ್ನ್ ಅಲ್-ಹೈಥಮ್" ಕ್ರಿ.ಶ.1011 ರಲ್ಲಿ ಒಮ್ಮೆ ತೀವ್ರ ಆತ್ಮವಿಶ್ವಾಸದಿಂದ, 'ನಾನು ಈಜಿಪ್ಟ್‌ನಲ್ಲಿ ಏನಾದರೂ ಇದ್ದಿದ್ದರೆ, ನೈಲ್ ನದಿಯ ನೀರನ್ನು ನಿಯಂತ್ರಿಸಲು ಒಂದು ದೊಡ್ಡ ಅಣೆಕಟ್ಟು ಕಟ್ಟುತ್ತಿದ್ದೆ!' ಎಂದು ಹೇಳಿದರು. ಈ ಸುದ್ದಿ ವ್ಯಾಪಾರಿಗಳ ಮೂಲಕ ಕಾಳ್ಗಿಚ್ಚಿನಂತೆ ಹರಡಿ, ಈಜಿಪ್ಟ್ ಆಳುತ್ತಿದ್ದ ಫಾತಿಮಿದ್ ರಾಜವಂಶದ ಹಠಮಾರಿ ಮತ್ತು ಕ್ರೂರ ಖಲೀಫ ಅಲ್-ಹಾಕಿಮ್ ಕಿವಿಗೆ ತಲುಪಿತು.!
ಇದನ್ನು ಕೇಳಿದ ತಕ್ಷಣ ಖಲೀಫನು ಇಬ್ನ್ ಅಲ್-ಹೈಥಮ್ ಅವರಿಗೆ ಈಜಿಪ್ಟ್‌ಗೆ ಬರುವಂತೆ ರಾಜಾಹ್ವಾನ ನೀಡಿದನು. ಹೈಥಮ್ ಕೂಡ ಆಶ್ಚರ್ಯ ಮತ್ತು ಉತ್ಸುಕತೆಯಿಂದ ಹಿಂದೆಮುಂದೆ ಯೋಚಿಸದೆ ತಾವು ಸಿದ್ಧಪಡಿಸಿದ್ದ ಅಣೆಕಟ್ಟು ನಕ್ಷೆಯೊಂದಿಗೆ ಕೈರೋ ನಗರದ ಕಡೆ ಪ್ರಯಾಣ ಬೆಳೆಸಿದರು. ಕೈರೋ ತಲುಪಿದಾಗ ಸ್ವತಃ ಖಲೀಫನೇ ಬಂದು ಅವರನ್ನು ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಂಡನು. ತದನಂತರ, ಅಣೆಕಟ್ಟು ನಿರ್ಮಿಸಲು ಸೂಕ್ತ ಜಾಗ ಎಂದು ಭಾವಿಸಲಾಗಿದ್ದ ದಕ್ಷಿಣ ಈಜಿಪ್ಟ್‌ನ ಅಸ್ವಾನ್ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಕರೆದುಕೊಂಡು ಹೋದನು.
"ಆದರೆ, ಅಸ್ವಾನ್ ಪ್ರದೇಶ ತಲುಪಿದ ನಂತರ ಹೈಥಮ್ ಅವರಿಗೆ ಭಾರಿ ಆಘಾತ ಕಾದಿತ್ತು. ನೈಲ್ ನದಿಯ ಭೀಕರ ಅಗಲ, ಆಳ ಮತ್ತು ನೀರಿನ ರಾಕ್ಷಸ ಹರಿವನ್ನು ಕಣ್ಣಾರೆ ಕಂಡಾಗ, ಅಂದಿನ ಕಾಲದ ತಂತ್ರಜ್ಞಾನದಿಂದ ಅಲ್ಲಿ ಅಣೆಕಟ್ಟು ನಿರ್ಮಿಸುವುದು ಅಸಾಧ್ಯ ಎಂಬ ಕಹಿ ಸತ್ಯ ಅವರಿಗೆ ತಕ್ಷಣವೇ ಮನವರಿಕೆಯಾಯಿತು ಜೊತೆಗೆ ಪ್ರಾಣ ಭಯವೂ ಶುರುವಾಯಿತು!
ಏಕೆಂದರೆ ಖಲೀಫ ಅಲ್-ಹಾಕಿಮ್ ಎಂತಹ ಕ್ರೂರಿಯಾಗಿದ್ದನೆಂದರೆ, ತನ್ನ ಆಜ್ಞೆ ಮೀರಿದವರ ಅಥವಾ ಸೋತವರ ತಲೆಯನ್ನು ತಕ್ಷಣವೇ ಉರುಳಿಸುತ್ತಿದ್ದನು. 'ನನ್ನಿಂದ ಈ ಕೆಲಸ ಸಾಧ್ಯವಿಲ್ಲ' ಎಂದು ನೇರವಾಗಿ ಹೇಳಿದರೆ ಸಾವು ಖಚಿತ ಎಂದು ಅರಿತ ಹೈಥಮ್ ಒಂದು ಚಾಣಾಕ್ಷ ಉಪಾಯ ಮಾಡಿದರು. ತಮಗೆ ಮಾನಸಿಕ ಸ್ಥಿಮಿತ ತಪ್ಪಿದೆ ಎಂದು ಹುಚ್ಚನಂತೆ ನಟಿಸಲು ಆರಂಭಿಸಿದರು.
ಅವರ ವಿಚಿತ್ರ ವರ್ತನೆ ಮತ್ತು ಅಸಂಬದ್ಧ ಮಾತುಗಳನ್ನು ಕಂಡು ಕೋಪಗೊಂಡರೂ ಮರುಕಪಟ್ಟ ಖಲೀಫನು ಅವರನ್ನು ಕೊಲ್ಲುವ ಬದಲು, ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು ಕೈರೋದ ಅಲ್-ಅಝರ್ ಮಸೀದಿಯ ಬಳಿ ಇದ್ದ ಒಂದು ಸಣ್ಣ ಕತ್ತಲೆ ಕೋಣೆಯಲ್ಲಿ ಗೃಹಬಂಧನದಲ್ಲಿಟ್ಟನು.
ಆದರೆ, ಆ ಕತ್ತಲೆ ಕೋಣೆಯ ಬಂಧನವೇ ವಿಜ್ಞಾನ ಲೋಕಕ್ಕೆ ವರವಾಗಿ ಪರಿಣಮಿಸಿತು. ಸುಮಾರು ಹತ್ತು ವರ್ಷಗಳ ಕಾಲ (1011 - 1021) ನಡೆದ ಆ ಜೈಲುವಾಸದಲ್ಲಿ, ಅವರು ಗೋಡೆಯಲ್ಲಿದ್ದ ಒಂದು ಸಣ್ಣ ರಂಧ್ರದ ಮೂಲಕ ಸೂರ್ಯನ ಬೆಳಕು ಒಳಬರುವುದನ್ನು ಗಮನಿಸಿ ಅಭ್ಯಾಸ ಮಾಡಿದರು. ಆ ಬೆಳಕು ಎದುರಿನ ಬಿಳಿ ಗೋಡೆಯ ಮೇಲೆ ಹೊರಗಿದ್ದ ಮರಗಳು, ಕಟ್ಟಡಗಳು ಮತ್ತು ಜನರ ತಲೆಕೆಳಗಾದ ಸ್ಪಷ್ಟ ಚಿತ್ರವನ್ನು ಮೂಡಿಸುತ್ತಿತ್ತು. ಅದರಿಂದ ಜಗತ್ತಿನ ಮೊದಲ 'ಪಿನಹೋಲ್ ಕ್ಯಾಮೆರಾ' ತತ್ವವನ್ನು ಕಂಡುಹಿಡಿದರು. ಅರೇಬಿಕ್‌ನಲ್ಲಿ 'ಕಮರಾ' ಎಂದರೆ 'ಕತ್ತಲೆ ಕೋಣೆ' (Dark Room) ಎಂದರ್ಥ. ಕಣ್ಣಿನ ರಚನೆ ಮತ್ತು ದೃಷ್ಟಿಯ ನಿಯಮಗಳನ್ನು ಜಗತ್ತಿಗೆ ಪರಿಚಯಿಸಿದ ಅವರ ಪ್ರಸಿದ್ಧ 'ದೃಗ್ವಿಜ್ಞಾನದ ಪುಸ್ತಕ' (Kitab al-Manazir) ಮೂಡಿಬಂದಿದ್ದು ಇದೇ ಕತ್ತಲೆ ಕೋಣೆಯಲ್ಲಿ.
ವಿಜ್ಞಾನದ ಪ್ರಯೋಗಗಳಿಗೆ ಗಣಿತ ಮತ್ತು ರೇಖಾಗಣಿತವನ್ನು ಬಳಸಿದ ಮೊದಲ ವ್ಯಕ್ತಿ ಇವರೇ. ಬೆಳಕು ಹೇಗೆ ಚಲಿಸುತ್ತದೆ ಮತ್ತು ಕನ್ನಡಿಗಳ ಮೇಲೆ ಬಿದ್ದಾಗ ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ಅವರು ಗಣಿತದ ಸೂತ್ರಗಳ ಮೂಲಕ ನಿಖರವಾಗಿ ಲೆಕ್ಕ ಹಾಕಿ ತೋರಿಸಿದರು.
1021 ರಲ್ಲಿ ಖಲೀಫ ಅಲ್-ಹಾಕಿಮ್ ಮರಣ ಹೊಂದಿದ ನಂತರವಷ್ಟೇ ಹೈಥಮ್ ಅವರಿಗೆ ಆ ಬಂಧನದಿಂದ ಮುಕ್ತಿ ಸಿಕ್ಕಿತು.
ಇತಿಹಾಸದ ಅದ್ಭುತ ಎಂದರೆ, ಹೈಥಮ್ ಅಂದು ನೈಲ್ ನದಿಯ ಯಾವ ಜಾಗದಲ್ಲಿ ನಿಂತು ಅಣೆಕಟ್ಟಿನ ಕನಸು ಕಂಡಿದ್ದರೋ, ಸರಿಯಾಗಿ 950 ವರ್ಷಗಳ ನಂತರ (1960 ರಲ್ಲಿ) ಅದೇ ಜಾಗದಲ್ಲಿ ಆಧುನಿಕ ಇಂಜಿನಿಯರಿಂಗ್ ಬಳಸಿ ಜಗತ್ತಿನ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ 'ಅಸ್ವಾನ್ ಹೈ ಡ್ಯಾಮ್' ಅನ್ನು ನಿರ್ಮಿಸಲಾಯಿತು. ಅಂದರೆ, ಹೈಥಮ್ ಅವರ ಇಂಜಿನಿಯರಿಂಗ್ ದೃಷ್ಟಿಕೋನ ತೀರಾ ನಿಖರವಾಗಿತ್ತು, ಆದರೆ ಅವರ ಕಾಲದಲ್ಲಿ ಅದಕ್ಕೆ ಬೇಕಾದ ಆಧುನಿಕ ಯಂತ್ರಗಳಷ್ಟೇ ಇರಲಿಲ್ಲ! ಬಸ್ರಾದಲ್ಲಿ ಆಡಿದ ಆ ಒಂದು ಮಾತು ಅವರನ್ನು ಕತ್ತಲೆ ಕೋಣೆಗೆ ತಳ್ಳಿದರೂ, ಆ ಕತ್ತಲೆಯಿಂದಲೇ ಅವರು ಇಡೀ ಜಗತ್ತಿಗೆ ಆಧುನಿಕ ವಿಜ್ಞಾನದ ಬೆಳಕನ್ನು ನೀಡಿದರು.
"ಯಾವುದೇ ಸಿದ್ಧಾಂತವನ್ನು ಪ್ರಯೋಗಗಳ ಮೂಲಕ ಸಾಬೀತುಪಡಿಸದಿದ್ದರೆ ಅದು ವಿಜ್ಞಾನವೇ ಅಲ್ಲ" ಎಂದು ವಾದಿಸಿದ ಇಬ್ನ್ ಅಲ್-ಹೈಥಮ್ (ಅಲ್ಹಾಜೆನ್) ಅವರನ್ನು ಇತಿಹಾಸಕಾರರು"ಜಗತ್ತಿನ ಮೊದಲ ನಿಜವಾದ ವಿಜ್ಞಾನಿ" ಎಂದು ಕರೆಯುತ್ತಾರೆ
(ವಿಶ್ವ ಮಾನವರು)
