ಬೆಳಗಾವಿ : ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೈಬಿಟ್ಟಿರುವುದು ನಾಡಿನ ಜನತೆಗೆ ದಿಗ್ಭ್ರಮೆ ಮೂಡಿಸಿದೆ. ಇಡೀ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಪಕ್ಷ ಭೇದ ಮರೆತು ಇದೀಗ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಅತ್ಯಂತ ಪ್ರಭಾವಿಯಾಗಿ ಕೆಲಸ ನಿರ್ವಹಿಸಿದ್ದರು. ಅತ್ಯಂತ ಕ್ರಿಯಾಶೀಲ ಹಾಗೂ ಉತ್ಸಾಹಿ ಸಚಿವರಾಗಿ ಹೆಸರು ಮಾಡಿದ್ದರು. ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಭಾಗ್ಯಲಕ್ಷ್ಮೀ ಯೋಜನೆ ಯಶಸ್ವಿ ಎಂದು ಕರೆಸಿಕೊಳ್ಳಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣೀಕರ್ತರಾಗಿದ್ದರು.
ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಅತ್ಯುತ್ತಮ ಸಂವಹನ ನಡೆಸಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅವರು ಪರಿಶ್ರಮಪಟ್ಟಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅವರು ಹೊಸ ಮೆರುಗನ್ನೇ ತಂದು ಕೊಟ್ಟಿದ್ದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಳೆದ ಮೂರು ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು ಇತಿಹಾಸವಾಗಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಅವರು ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಭಿವೃದ್ಧಿ ವಂಚಿತಗೊಂಡಿದ್ದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಂಚಲನಕ್ಕೆ ಕಾರಣರಾಗಿದ್ದರು. ತಾವು ಪ್ರತಿನಿಧಿಸುತ್ತಿರುವ ಈ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಅನುದಾನ ಹರಿದು ಬರಲು ನೇರ ಕಾರಣರಾಗಿದ್ದರು. ಇಡೀ ರಾಜ್ಯಾದ್ಯಂತ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾಡಿನ ಜನತೆಯ ಅತ್ಯಂತ ಪ್ರೀತಿ ಪಾತ್ರ ಸಚಿವೆ ಎಂದು ಕರೆಸಿಕೊಂಡಿದ್ದರು. ಅತ್ಯಂತ ಚುರುಕುತನದಿಂದ ಹಾಗೂ ಮಾದರಿಯಾದ ರೀತಿಯಿಂದ ಕೆಲಸ ಮಾಡುತ್ತಿದ್ದ ಅವರ ಸೇವೆ ಲಭ್ಯವಿಲ್ಲದೇ ಇರುವುದಕ್ಕೆ ಇದೀಗ ನಾಡಿನ ಜನತೆ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳಾ ಕೋಟಾದಲ್ಲಿ ಇನ್ನೂ ಒಂದು ಸ್ಥಾನ ತುಂಬಲು ಅವಕಾಶ ಇದೆ. ಕಾಲ ಇನ್ನು ಮಿಂಚಿಲ್ಲ. ಆಗಿರುವ ತಪ್ಪನ್ನು ಕಾಂಗ್ರೆಸ್ ಹೈಕಮಾಂಡ್ ಸರಿಪಡಿಸಬೇಕು. ಈ ಕೂಡಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ರಾಜ್ಯದ ಜನತೆ ಒತ್ತಾಯಿಸುತ್ತಿದ್ದಾರೆ.