ನವದೆಹಲಿ: ಜಾಗತಿಕವಾಗಿ ತಾಪಮಾನ ಏರಿಕೆಯ ಅಪಾಯಕ್ಕೆ ಅತಿ ಹೆಚ್ಚು ತುತ್ತಾಗುವ ವಿಶ್ವದ ಅಗ್ರ 10 ನಗರಗಳ ಪೈಕಿ ಭಾರತದ 3 ನಗರಗಳು ಸ್ಥಾನ ಪಡೆದಿವೆ. ಆಕ್ಸ್‌ಫರ್ಡ್ ವಿವಿ ಬಿಡುಗಡೆ ಮಾಡಿರುವ ಈ ಆತಂಕಕಾರಿ ಅಧ್ಯಯನ ಪಟ್ಟಿಯಲ್ಲಿ ಗುಜರಾತ್‌ನ ಅಹಮದಾಬಾದ್ ವಿಶ್ವದಲ್ಲೇ 2ನೇ ಸ್ಥಾನ ಪಡೆದಿದ್ದರೆ, ಮಹಾರಾಷ್ಟ್ರದ ನಾಗ್ಪುರ 4ನೇ ಸ್ಥಾನ ಹಾಗೂ ತಮಿಳುನಾಡಿನ ಮಧುರೈ 7ನೇ ಸ್ಥಾನ ಪಡೆದಿದೆ. ಜಾಗತಿಕವಾಗಿ ಇರಾಕ್‌ನ ಅಲ್ ಬಸ್ರಾ ನಗರವು ಅತಿ ಹೆಚ್ಚು ಅಪಾಯ ಎದುರಿಸುತ್ತಿರುವ ನಗರವಾಗಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅಹಮದಾಬಾದ್, ಬಮಾಕೊ, ನಾಗ್ಪುರ, ಕ್ವೆಜಾನ್ ಸಿಟಿ, ಬಾಗ್ದಾದ್, ಮಧುರೈ, ಫೈಸಲಾಬಾದ್, ಲಾಗೋಸ್ ಮತ್ತು ಪಾಕಿಸ್ತಾನದ ಹೈದರಾಬಾದ್ ನಗರಗಳಿವೆ. ಅತಿ ಹೆಚ್ಚು ಅಪಾಯ ಎದುರಿಸುತ್ತಿರುವ ಶೇ.95ಕ್ಕಿಂತಲೂ ಹೆಚ್ಚು ನಗರಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಹಾಗೂ ಸಹರಾ ಭಾಗಗಳಲ್ಲಿ ಕೇಂದ್ರೀಕೃತವಾಗಿವೆ.
ಅಹಮದಾಬಾದ್‌ಗಿಂತಲೂ ಹೆಚ್ಚು ತಾಪಮಾನ ಹೊಂದಿರುವ ಅನೇಕ ನಗರಗಳು ವಿಶ್ವದಲ್ಲಿವೆ. ಆದರೆ, ಅಲ್ಲಿನ ಜನರಿಗೆ ಹೆಚ್ಚಿನ ಹಸಿರು ಹೊದಿಕೆ ಅಥವಾ ಹವಾನಿಯಂತ್ರಣದ ಸೌಲಭ್ಯವಿರುವ ಕಾರಣ ಕಡಿಮೆ ಅಪಾಯ ಎದುರಿಸುತ್ತಿವೆ ಎನ್ನಲಾಗಿದೆ.
