ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿ, ಆದೇಶಿಸಿದೆ. ಜೂನ್ 21ರಿಂದ ಜುಲೈ 10ರ ವರೆಗೆ ಕಾಲಾವಕಾಶ ನೀಡಿ ಆದೇಶಿಸಿದೆ.
20 ದಿನ ನೀಡಿರುವ ಕಾಲಾವಕಾಶ ಬಳಸಿಕೊಂಡು ವಾಹನಗಳ ಮಾಲೀಕರು ದಂಡ ಪಾವತಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
2026ರ ಮೇ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್‌ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತು ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50 ರಿಯಾಯಿತಿ ನೀಡಿ ಆದೇಶಿಸಲಾಗಿದೆ.
ಅಸ್ಲಂ ಆ್ಯಪ್, ಕೆಎಸ್‌ಪಿಎಸ್ ಆ್ಯಪ್, ಕರ್ನಾಟಕ ಒನ್ ಕೇಂದ್ರಗಳೂ ಸೇರಿದಂತೆ ಸಂಬಂಧಪಟ್ಟ ವೇದಿಕೆಗಳಲ್ಲಿ ದಂಡವನ್ನು ಮಾಲೀಕರು ಪಾವತಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವ ಒಪ್ಪಿದ್ದ ರಾಜ್ಯ ಸರ್ಕಾರವು, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಳೆದ ವರ್ಷದ ನವೆಂಬರ್‌ನಲ್ಲೂ ಇಂಥ ರಿಯಾಯಿತಿ ನೀಡಲಾಗಿತ್ತು.
