ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಸ್ವೀಕರಿಸುವ ಸಂಬಂಧ ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗವು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಪತ್ರ ಬರೆದಿದೆ.
'ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ' ಹಾಗೂ 'ಗಡಿ ವಿವಾದಕ್ಕೆ ಮಹಾಜನ ವರದಿ ಅನುಷ್ಠಾನವೇ ಅಂತಿಮ ಪರಿಹಾರ' ಎಂಬ ನಿರ್ಣಯ ಸ್ವೀಕರಿಸುವುದು ಅವಶ್ಯಕ ಮತ್ತು ಅನಿವಾರ್ಯವಾಗಿದ್ದು, ನಿರ್ಣಯ ಸ್ವೀಕರಿಸಲು ಕಾನೂನಿನ ತೊಡಕು ಇಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ' ಎಂದು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರು ಪತ್ರದಲ್ಲಿ ತಿಳಿಸಿದ್ದಾರೆ. 'ನಿರ್ಣಯ ಅಂಗೀಕಾರಕ್ಕಾಗಿ ನಾವು ನಡೆಸುತ್ತಿರುವ ಹೋರಾಟದ ಬಗ್ಗೆ ಜುಲೈ 13ರಂದು ಆಯೋಗಕ್ಕೆ ತಿಳಿಸಿದ್ದೆವು. ಈ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಆಯೋಗ ತನ್ನ ಅಭಿಪ್ರಾಯ ಸ್ಪಷ್ಟಪಡಿಸಿದ್ದರಿಂದ ಸರ್ಕಾರವು ಪಾಲಿಕೆಗೆ ಈಗ ನಿರ್ಣಯ ಸ್ವೀಕರಿಸಲು ಆದೇಶಿಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.