ಕಾಕತಿ ಪೊಲೀಸರ ಬೇಜವಾಬ್ದಾರಿಗೆ ಮೊಮ್ಮಗನಿಂದಲೇ ಕೊಲೆಯಾದ ಅಜ್ಜಿ..!
ಪ್ರಾಣ ಭಿಕ್ಷೆಗಾಗಿ ಬಸ್ ಹತ್ತಿ ಠಾಣೆಗೆ ಬಂದ್ರು ಅಜ್ಜಿಯ ಆಕ್ರಂದನ ಆಲಿಸಿದ ಆರಕ್ಷಕರು.
SHO, ಹೊಯ್ಸಳ ಸಿಬ್ಬಂದಿ ಹೊಣೆಗೇಡಿತನಕೆ ಹೆಣವಾದ ಹೆಣ್ಣು ಜೀವ..!
ಬೆಳಗಾವಿ : ತಂದೆ ಇಲ್ಲದ ಮೊಮ್ಮಗನನ್ನು ಕೂಲಿ ಮಾಡಿ ಸಾಕಿ, ಸಲುಗಿ ದೊಡ್ಡವನನ್ನು ಮಾಡಿದಲ್ಲದೇ ಆತನ ಮದುವೆ ಮಾಡಿ ಸಂಸಾರ ಕಟ್ಟಿಕೊಟ್ಟ ಅಜ್ಜಿಯನ್ನೇ ಅದೇ ನೀಚ ಕ್ರೂರಿ ಮೊಮ್ಮಗ ಕುಡಿತ ಹಾಗೂ ಐಷಾರಾಮಿ ಜೀವನ ನಡೆಸಲು ಹಣಕ್ಕಾಗಿ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಅಗಸಗಿ ಗ್ರಾಮದ ಪಾಟೀಲ ಗಲ್ಲಿಯ ನಿವಾಸಿ 70 ವರ್ಷದ ವೃದ್ಧೆ ಬಾಳವ್ವ ಕಲ್ಲಪ್ಪ ಪಾಟೀಲ ಕೊಲೆಯಾದ ದುರ್ದೈವಿ ವೃದ್ಧೆ.
ಇವರ ಮೊಮ್ಮಗ 25 ವರ್ಷದ ಕಲಗೌಡ ಅಪ್ಪಯ್ಯಗೌಡ ಪಾಟೀಲ ಕೊಲೆ ಮಾಡಿರುವ ಆರೋಪಿ.
ಕಳೆದೆರಡು ವರ್ಷಗಳಿಂದ ಈತ ಬೈಕ್ , ವಾಹನ, ಐಷಾರಾಮಿ ಜೀವನ ಸೈಲಿಗಾಗಿ ಹಣಕ್ಕಾಗಿ ಅವರ ಅಜ್ಜಿ ಮತ್ತು ಪತ್ನಿಯನ್ನು ಪೀಡಿಸುತ್ತಿದ್ದ ಈತನಿಗೆ ಒಂದೊಂದಾಗಿ ನೀಡುತ್ತಾ ಬಂದಿದ್ದರು. ಆದರೆ ಆತನ ಕಿರುಕುಳ ಮಾತ್ರ ನಿಂತಿರಲಿಲ್ಲ. ಇದರಿಂದಾಗಿ ಪತಿಯ ಕಿರುಕುಳಕ್ಕೆ ಬೇಸತ್ತು ತಿಂಗಳಿಂದಷ್ಟೇ ಪತ್ನಿ ತವರುಮನೆ ಸೇರಿದ್ದಳು. ಇಷ್ಟಾದರೂ ಮೊಮ್ಮಗನ ಮೇಲಿನ ಮಮತೆಗೆ ಅಜ್ಜಿ ಆತನನ್ನು ಬಿಟ್ಟಿರಲಿಲ್ಲ. ಅವನ ಊಟ ಹಾಗೂ ಜೀವನೋಪಚಾರಕ್ಕೆ ಕಮ್ಮಿಯಾಗದಂತೆ ನೋಡಿಕೊಂಡಿದ್ದಳು. ಆದರೆ ಆ ನೀಚ ಮೊಮ್ಮಗ ಮಾತ್ರ ಹಣಕ್ಕಾಗಿ ಅಜ್ಜಿಯನ್ನು ಹೊಡೆಯುತ್ತಲೇ ಇದ್ದ, ಕೊನೆಗೆ ಅಜ್ಜಿಯ ಸಹನೆಯ ಕಟ್ಟೆ ಒಡೆದು ಒಂದೆರಡು ಬಾರಿ ಅವರಿವರಿಗೆ ಹೇಳಿ ಪೊಲೀಸರನ್ನು ಕರೆಸಿ ಸಹಾಯ ಕೇಳಿದ್ದಳು. ಆದರೂ ಪೊಲೀಸರು ಮಾತ್ರ ಅವನಿಗೆ ಸರಿಯಾಗಿ ಬುದ್ಧಿವಾದ ಮಾಡದೆ ಹಾಗೆ ಬಿಟ್ಟಿದ್ದರು.
ಇದರ ಪರಿಣಾಮ ನಿನ್ನೆ ಆತ ಅಜ್ಜಿಯನ್ನು ಮನೆಯೊಳಗೆ ಕೂಡು ಹಾಕಿ ಮನಸೋ ಇಚ್ಛೆ ತಳಿಸಿ ಅವಳ ಮೊಬೈಲ್ ಒಡೆದು ಸಿಮ್ ಮುರಿದು ಹಾಕಿ ಕೊಲೆಗೆ ಯತ್ನಿಸಿದ್ದ. ಇದರಿಂದ ಭಯಭೀತಕ್ಕೂಗೊಳಗಾಗಿದ್ದ ಅಜ್ಜಿ ನೇರವಾಗಿ ಬಸ್ಸು ಹತ್ತಿ ಕಾಕತಿ ಪೊಲೀಸ್ ಸ್ಟೇಷನ್ ಗೆ ಹೋಗಿ ತನ್ನ ಪ್ರಾಣ ಉಳಿಸುವಂತೆ ಖುದ್ದು ದೂರು ನೀಡಿದ್ದಳು. ಆದರೆ ಈ ದೂರನ್ನು ಕಾಕತಿ ಪೊಲೀಸರು ಮಾತ್ರ ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಆ ಬಡಪಾಯಿ ಜೀವ ಉಳಿಯುತ್ತಿತ್ತು. ಆದರೆ ಪೊಲೀಸರು ಆ ಅಜ್ಜಿಯನ್ನು ಮನೆಗೆ ತಂದು ಬಿಟ್ಟು ಆ ಕಿರಾತಕ ಮೊಮ್ಮಗನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಹಾಗೆ ಬಿಟ್ಟು ಹೋಗಿದ್ದೆ ಈ ದುರಂತಕ್ಕೆ ಕಾರಣವಾಗಿದೆ.
ಇತ್ತ ಪೊಲೀಸರು ಅಜ್ಜಿಯನ್ನು ಮನೆಗೆ ಬಿಟ್ಟು ಹೋಗುತ್ತಿದ್ದಂತೆ ಆ ನೀಚ ಮೊಮ್ಮಗ ಆತನ ಬಳಿ ಇದ್ದ ಚಾಕು ತೆಗೆದು ನಿನ್ನ ಪೊಲೀಸರು ಸಹ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ಆರ್ಭಟಿಸಿ ಅಜ್ಜಿಯ ಹೃದಯಕ್ಕೆ ಚುಚ್ಚಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಅಜ್ಜಿ ನಿಮಿಷದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.
ಈ ದುರಂತಕ್ಕೆ ಕಾಕತಿ ಪೊಲೀಸ್ ಠಾಣೆಯ SHO ಹಾಗೂ ಹೊಯ್ಸಳ ಸಿಬ್ಬಂದಿ ಬೇಜವಾಬ್ದಾರಿತನ ಕಾರಣ ಎಂದು ತಿಳಿದುಬಂದಿದೆ.
ಸಂಜೆ ಸಮಯದಲ್ಲಿ ಬಸ್ಸು ಹತ್ತಿ ಖುದ್ದು ಠಾಣೆಗೆ ಬಂದ ಅಜ್ಜಿಯ ಆಕ್ರಂದನವನ್ನು ಕೇಳಿ ಸರಿಯಾಗಿ ಸ್ಪಂದಿಸಿದ್ದರೇ ಆ ಬಡ ಜೀವ ಇಂದು ಬದುಕುಳಿಯುತ್ತಿತ್ತು. ಆದರೆ ಈ ದುರಂತಕ್ಕೆ ಪೊಲೀಸರ ಹೊನೆಗೇಡಿತನ ಕಾರಣವೆಂದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.
ರಕ್ತಸಿಕ್ತವಾದ 112 ಬರೆದ ಕಾಗದ..!
ಠಾಣೆಗೆ ಹೋಗಿದ್ದ ಅಜ್ಜಿಗೆ ಕಾಗದದ ಮೇಲೆ 112 ಬರೆದು ಕೊಟ್ಟ ಪೊಲೀಸರು ನಿನಗೆ ತೊಂದರೆಯಾದಾಗ ಈ ನಂಬರಿಗೆ ಕಾಲ್ ಮಾಡು ಎಂದು ಹೇಳಿದ್ದರು.
ಅದರಂತೆ ಮೊಮ್ಮಗ ಅವಳ ಎದೆಗೆ ಚಾಕು ಹಾಕಿದಾಗ ರಕ್ತದ ಮಡುವಿನಲ್ಲಿದ್ದ ಆಕೆ ತಕ್ಷಣ ಅದನ್ನು ಅಲ್ಲಿದ್ದವರಿಗೆ ತೆಗೆದುಕೊಟ್ಟು ಈ ನಂಬರಿಗೆ ಕಾಲ್ ಮಾಡಿ ಪೊಲೀಸರನ್ನು ಕರೆಸಿ, ಈತನನ್ನು ಜೈಲಿಗೆ ಹಾಕಿಸಿ ಎಂದು ಕೊನೆಯದಾಗಿ ಆಡಿದ ಮಾತು ಅಲ್ಲಿದ್ದವರ ಮಮ್ಮಲ ಮರಗುವಂತೆ ಮಾಡಿದೆ.
ಒಟ್ಟಿನಲ್ಲಿ ಜನಸಾಮಾನ್ಯರಿಗೆ ಹಾದಿ ಬೀದಿಗಳಲ್ಲಿ ತೊಂದರೆ ಕೊಡುವ ಪೊಲೀಸರು ತನ್ನ ಪ್ರಾಣಭಿಕ್ಷೆಗಾಗಿ ಬಸ್ಸು ಹತ್ತಿ ಠಾಣೆಗೆ ಹೋದ ಅಜ್ಜಿಯ ಪ್ರಾಣದ ಜೊತೆ ಚೆಲ್ಲಾಟವಾಡಿರುವುದು ಮಾನವ ಕುಲಕ್ಕೆ ಕಳಂಕ ತರುವ ಘಟನೆಯಾಗಿದೆ.
ಇನ್ನೂ ಬಂಧನವಾಗದ ಕೊಲೆ ಆರೋಪಿ..!
ಕೊಲೆ ಮಾಡಿ ಪರಾರಿಯಾಗಿರುವ ಕ್ರೂರಿ ಆರೋಪಿಯನ್ನು ಕಾಕತಿ ಪೊಲೀಸರು ಇನ್ನೂ ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಬೆಳಗಾವಿ ಕಮಿಷನರ್ ವ್ಯಾಪ್ತಿಯಲ್ಲಿ ಪೊಲೀಸ್ ಕಾರ್ಯವೈಖರಿ ಬಗ್ಗೆ ಜನ ಉಗಿಯೂವಂತಾಗಿದೆ.
ಡಿಸಿಪಿ,ಎಸಿಪಿ ಭೇಟಿ; ಸ್ಥಳದಲ್ಲೇ ಠಿಕಾಣಿ ಹೂಡಿರುವ PI ,PSI..!
ಠಾಣೆಯ SHO ಹಾಗೂ ಹೊಯ್ಸಳ ಸಿಬ್ಬಂದಿಯ ಹೊಣೆಗೇಡಿತನಕ್ಕೆ ಇಡಿ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನಿನ್ನೆ ತಡರಾತ್ರಿ ಡಿಸಿಪಿ ನಾರಾಯಣ ಬರಮನಿ ಹಾಗೂ ಎಸಿಪಿ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೀವ್ರ ತನಿಖೆಗೆ ಆದೇಶಿಸಿದ್ದಾರೆ. ಪಿಐ ಸುರೇಶ ಶಿಂಗಿ ಹಾಗೂ ಮಂಜುನಾಥ ನಾಯಕ ಗ್ರಾಮದಲ್ಲಿ ಠಿಕಾಣಿ ಹೂಡಿ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಘಟನೆ ಮಾತ್ರ ಕಾಕತಿ ಪೊಲೀಸರ ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿ ಇರಲಿದೆ ಎಂದು ಸಾರ್ವಜನಿಕರ ಆಕ್ರೋಶದಿಂದ ತಿಳಿದುಬರುತ್ತದೆ.
