ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಪತಿ-ಪತ್ನಿಯ ನಡುವೆ ನಡೆದ ಜಗಳವು ಹಿಂಸಾತ್ಮಕ ರೂಪ ಪಡೆದುಕೊಂಡು, ಬೆಳಗಾಗುವಷ್ಟರಲ್ಲಿ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಸಿವಿಲ್ ಎಂಜಿನಿಯರ್ ಆಗಿದ್ದ ಸುಮಂತ್ ಜೈನ್ ಹಾಗೂ ಅವರ ಪತ್ನಿ, ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಪದ್ಮಾವತಿ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ದಂಪತಿ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ಆರಂಭವಾಗಿದ್ದು, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ ಎನ್ನಲಾಗಿದೆ. ಈ ವೇಳೆ ಕೋಪದಲ್ಲಿ ಸುಮಂತ್, ಪದ್ಮಾವತಿಯ ಮುಖಕ್ಕೆ ಹೊಡೆದು ಬಳಿಕ ದಿಂಬಿನಿಂದ ಆಕೆಯ ಉಸಿರುಗಟ್ಟಿಸಿದ್ದಾನೆ ಎಂದು ಪ್ರಾಥಮಿಕವಾಗಿ ಆರೋಪಿಸಲಾಗಿದೆ. ಬಳಿಕ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆಕೆ ಉಸಿರಾಡುತ್ತಿಲ್ಲ ಎಂಬುದು ಸುಮಂತ್‌ಗೆ ಗೊತ್ತಾಗಿದೆ ಎನ್ನಲಾಗಿದೆ.
ಘಟನೆಯಿಂದ ಆತಂಕಗೊಂಡ ಸುಮಂತ್, ಭಯದಿಂದ ಗಾಬರಿಗೊಂಡು ತನ್ನ ತಾಯಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದ್ದಾನೆ ಎನ್ನಲಾಗಿದೆ. ನಂತರ ತನ್ನ ತಾಯಿಗೆ ಸಂದೇಶವೊಂದನ್ನೂ ಕಳುಹಿಸಿದ್ದಾನೆ.
ಆ ಸಂದೇಶವನ್ನು ನೋಡಿದ ಸುಮಂತ್‌ನ ತಾಯಿ ತಕ್ಷಣ ಪರಿಚಯದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಮನೆ ಬಾಗಿಲು ತೆಗೆದು ನೋಡಿದಾಗ, ಹಾಲ್‌ನಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ಸುಮಂತ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅದೇ ವೇಳೆ ಪದ್ಮಾವತಿಯೂ ಮೃತಪಟ್ಟಿರುವುದು ಕಂಡುಬಂದಿದೆ.
ಮಾಹಿತಿ ಪಡೆದ ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದಂಪತಿಯ ಸಾವಿನ ಹಿಂದಿನ ಸಂಪೂರ್ಣ ಘಟನೆಗಳ ಕುರಿತು ತನಿಖೆ ಆರಂಭಿಸಿದ್ದಾರೆ.
ಆದರೆ ಪದ್ಮಾವತಿಯ ನಿಖರ ಸಾವಿನ ಕಾರಣವೇನು ಹಾಗೂ ಘಟನೆಗಳ ನಿಖರ ಕ್ರಮ ಹೇಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಎರಡೂ ಅಂಶಗಳನ್ನು ತನಿಖೆಯ ಬಳಿಕವೇ ಖಚಿತಪಡಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯ ನಡುವಿನ ಜಗಳ ಹೇಗೆ ಈ ದುರಂತಕ್ಕೆ ತಿರುಗಿತು ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ವಾಯ್ಸ್ ಮೆಸೇಜ್‌ನಲ್ಲಿ ಸ್ಫೋಟಕ ಕಾರಣ ಬಹಿರಂಗ!
ಸುಮಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ನಾನು ಸಾಯುತ್ತಿದ್ದೇನೆ. ಈ ಮನೆ ನನ್ನದು ನನ್ನದು ಎಂದು ಹೇಳುತ್ತಿರುವ ಪತ್ನಿ ಜೊತೆ ಜಗಳವಾಗುತ್ತಿದೆ. ಈ ವಿಷಯವಾಗಿ ನಾನು ಸಾಯುತ್ತಿದ್ದೇನೆ. ನನ್ನ ಪಿಎಫ್ ಹಣ ಹಾಗೂ ಮನೆಯಲ್ಲಿ ಇರುವ ವಸ್ತುಗಳನ್ನು ನೀವೆ ತೆಗೆದುಕೊಂಡು ಹೋಗಿ ಎಂದು ಕೊನೆಯದಾಗಿ ಸುಮಂತ್ ವಾಟ್ಸಾಪ್ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ ಸಾವಿಗೆ ಶರಣಾಗಿದ್ದಾನೆ.
ಇನ್ನು ಈ ಘಟನೆ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರ ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.