ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಾಂಗ್ರೆಸ್‌ನ ಮುಖಂಡ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಮುಖಂಡ ಸದಾಶಿವ ದೇಶಿಂಗೆ ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ್ದಾರೆ.
ಬೆಂಗಳೂರು ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ಬಾವುಟ ನೀಡಿ ಹಾಗೂ ಕಂಬಳಿ ಹೊದಿಸಿ ಸದಾಶಿವ ದೇಶಿಂಗೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಶಾಸಕರಾದ ಬೈರತಿ ಬಸವರಾಜು, ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಾಡು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಪಕ್ಷದ ಹಲವು ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಸದಾಶಿವ ದೇಶಿಂಗೆ ಅವರು ಕುರುಬ ಸಮಾಜದಲ್ಲಿ ಪ್ರಭಾವಿ ನಾಯಕರು ಎಂದು ಬಣ್ಣಿಸಿದರು. ರಾಯಬಾಗ ಸೇರಿದಂತೆ ಬೆಳಗಾವಿ ಭಾಗದಲ್ಲಿ ಸದಾಶಿವ ದೇಶಿಂಗೆ ಅವರಿಗೆ ಉತ್ತಮ ಜನಬೆಂಬಲವಿದೆ. ಅವರ ಬಿಜೆಪಿ ಸೇರ್ಪಡೆಯಿಂದ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು.
ಪಿ. ರಾಜೀವ್ ಪೋಸ್ಟ್‌ನಲ್ಲಿ ಏನಿದೆ? : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಉದ್ಯಮಿ ಹಾಗೂ ಹಾಲುಮತ ಸಮಾಜದ ಯುವ ಮುಖಂಡರಾದ ಸದಾಶಿವ ದೇಶಿಂಗೆ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅವರ ಸಾಮಾಜಿಕ ಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ಯುವಜನರಲ್ಲಿ ಹೊಂದಿರುವ ಪ್ರಭಾವ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸವನ್ನು ಪಕ್ಷದ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.