ಯಾರನ್ನು ಕಣಕ್ಕಿಳಿಸಿದರೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಇವೆ. ಪ್ರಬಲ ಪೈಪೋಟಿ ನೀಡಲಿರುವ, ಜಿಲ್ಲೆಯ ಜನತೆಗೆ ಚಿರಪರಿಚಿತವಾಗಿರುವ ವರ್ಚಸ್ವಿ ನಾಯಕರಿಗೆ ಟಿಕೆಟ್ ನೀಡುವುದು ಖಚಿತ. ಗೆಲುವು ತಂದು ಕೊಡಬಲ್ಲವರು ಯಾರು ? ಅಂಥ ಸಾಮರ್ಥ್ಯ ಯಾರಿಗೆ ಇದೆ ? ಯಾರಿಗೆ ಟಿಕೆಟ್ ನೀಡಿದರೆ ಬೆಳಗಾವಿಯನ್ನು ವಶಪಡಿಸಿಕೊಳ್ಳಬಹುದು ಎಂಬ ಕದನ ಕುತೂಹಲ ಎಲ್ಲರಲ್ಲೂ ಮೂಡಿದೆ.
ಬೆಳಗಾವಿ :
ಬೆಳಗಾವಿ ಜಿಲ್ಲೆ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಅದರಲ್ಲೂ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಅಭ್ಯರ್ಥಿಗಳ ದಂಡೇ ಇದೀಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದ್ದು ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಎರಡು ಪಕ್ಷಗಳು ಮುಂದಾಗಿರುವುದು ಈ ಸಲದ ಚುನಾವಣೆಯ ವಿಶೇಷವಾಗಿದೆ.
ಸದ್ಯ ಬೆಳಗಾವಿ ಲೋಕಸಭಾ ಮತಕ್ಷೇತ್ರವನ್ನು ಬಿಜೆಪಿಯ ಮಂಗಲಾ ಅಂಗಡಿ ಪ್ರತಿನಿಧಿಸುತ್ತಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆದ್ದಿರುವ ಅವರಿಗೆ ಈ ಬಾರಿ ಟಿಕೆಟ್ ಸಿಗುತ್ತದೋ ಇಲ್ಲವೋ ಕಾದುನೋಡಬೇಕಾಗಿದೆ. ಈ ನಡುವೆ ಪ್ರತಿಷ್ಠಿತ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿರುವ ರಾಜ್ಯ ಬಿಜೆಪಿ ಸಾರಥ್ಯ ವಹಿಸಿರುವ ವಿಜಯೇಂದ್ರ ಅವರು ಇದೀಗ ಜಾರಕಿಹೊಳಿ ಕುಟುಂಬದ ಮೇಲೆ ಕಣ್ಣು ಹಾಕಿದ್ದಾರೆ. ಜಾರಕಿಹೊಳಿ ಕುಟುಂಬದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ಹಾಗೂ ಅರಬಾವಿ ಹಾಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸುವ ಉತ್ಸುಕತೆ ತೋರಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೆಲ ದಿನಗಳಿಂದ ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಮೇಲಿಂದ ಮೇಲೆ ಬಾಲಚಂದ್ರ ಜಾರಕಿಹೊಳಿಯವರ ಹೆಸರು ತೇಲಿ ಬರುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಂಗಲಾ ಅಂಗಡಿ, ಬಾಲಚಂದ್ರ ಜಾರಕಿಹೊಳಿ, ಮಾಜಿ ಶಾಸಕರಾದ ಅನಿಲ್ ಬೆನಕೆ, ಸಂಜಯ ಪಾಟೀಲ, ನ್ಯಾಯವಾದಿ ಮುರುಘೇಂದ್ರ ಪಾಟೀಲ, ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ ಮತಕ್ಷೇತ್ರದಲ್ಲಿ ಕಣಕ್ಕಿಳಿಯಲು ಮುಂದಾಗಿದ್ದ ಡಾ.ಸೋನಾಲಿ ಸರ್ನೋಬತ್ ಮುಂತಾದವರ ಹೆಸರು ಮುನ್ನೆಲೆಗೆ ಬಂದಿದೆ.
ಅತ್ತ ಕಳೆದ ಲೋಕಸಭಾ ಚುನಾವಣೆಯಲ್ಲಿ ಇನ್ನೇನು ಬಿಜೆಪಿಗೆ ಸೋಲುಣಿಸಿಯೇ ಬಿಟ್ಟರು ಎನ್ನುವಷ್ಟು ಭಾರಿ ಪೈಪೋಟಿ ನೀಡಿದ್ದ ಚಿರಪರಿಚಿತ ನಾಯಕ ಸತೀಶ ಜಾರಕಿಹೊಳಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ಅಷ್ಟೊಂದು ಆಸಕ್ತಿ ತೋರಿಲ್ಲ. ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಸಚಿವರಾಗಿರುವ ಅವರು ಉಪಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಪ್ರತಿಷ್ಠಿತ ಹುದ್ದೆಗೆ ಅವರ ಹೆಸರು ಆಗಾಗ ಕೇಳಿ ಬರುತ್ತಿದೆ. ಹೀಗಾಗಿ ರಾಜ್ಯ ರಾಜಕಾರಣ ಬಿಟ್ಟು ಅವರು ರಾಷ್ಟ್ರ ರಾಜಕಾರಣಕ್ಕೆ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಹೈಕಮಾಂಡ್ ಬಿಗು ಪಟ್ಟು ಹಿಡಿದರೆ ಮಾತ್ರ ಅವರು ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವ ಸಾಧ್ಯತೆ ಇದೆ. ಅದು ಸದ್ಯದ ಪರಿಸ್ಥಿತಿಯಲ್ಲಿ ಒಲ್ಲದ ಮನಸ್ಸಿನಿಂದ ಮಾತ್ರ. ಅವರ ಸುಪುತ್ರಿ ಪ್ರಿಯಾಂಕಾ ಅವರ ಹೆಸರು ಸಹಾ ಆಗಾಗ ಕೇಳಿ ಬರುತ್ತಿತ್ತು. ಈ ನಡುವೆ ಅವರು ತಮ್ಮ ಕುಟುಂಬದಿಂದ ಯಾರು ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದಿಂದ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಸಚಿವೆಯಾಗಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಕುಟುಂಬದ ಕುಡಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸುವ ತವಕದಲ್ಲಿದ್ದಾರೆ. ಲಿಂಗಾಯತರಾಗಿರುವ ಕಾರಣಕ್ಕೆ ಮತದಾರರ ಕೃಪಾಕಟಾಕ್ಷ ಒಲಿಯುವ ಸಾಧ್ಯತೆ ಹೆಚ್ಚಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಮಾಜಿ ಸಂಸದ ಅಮರಸಿಂಹ ಪಾಟೀಲ, ಬೈಲಹೊಂಗಲದ ಕಿರಣ ಸಾಧುನವರ ಸೇರಿದಂತೆ ಇನ್ನು ಕೆಲವರ ಹೆಸರು ಕಾಂಗ್ರೆಸ್ ಪಡೆಸಾಲೆಯಲ್ಲಿ ಓಡಾಡುತ್ತಿದೆ.
ಮಾಡು ಇಲ್ಲವೇ ಮಡಿ ಎಂಬಂತೆ ಕಾಂಗ್ರೆಸ್ ಪಕ್ಷದ ಪಾಲಿಗೆ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕ. ಹೀಗಾಗಿ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಗಾದರೂ ಮಾಡಿ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಈ ಬಾರಿ ಹೊಸ ಇತಿಹಾಸ ಸೃಷ್ಟಿಗೆ ಮುಂದಾಗಿದ್ದು ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸ್ಥಾನ ಪಡೆದಿರುವ ಕಾರಣಕ್ಕೆ ಬೆಳಗಾವಿ ಕ್ಷೇತ್ರವನ್ನು ಗೆದ್ದೇ ಗೆಲ್ಲಬೇಕು ಎಂಬ ಛಲ ತೊಟ್ಟಿದ್ದಾರೆ. ಹೀಗಾಗಿ ಈ ಇಬ್ಬರು ಸಚಿವರ ಮಕ್ಕಳ ಹೆಸರು ಕಳೆದ ಆರು ತಿಂಗಳಿನಿಂದ ಬೆಳಗಾವಿ ಚುನಾವಣಾ ರಾಜಕಾರಣದಲ್ಲಿ ಪ್ರಬಲವಾಗಿ ಓಡಾಡುತ್ತಿದೆ.
ಒಟ್ಟಾರೆ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಬೆಳಗಾವಿಯಿಂದ ಕಣಕ್ಕಿಳಿಸುತ್ತದೆ ಕಾದು ನೋಡಬೇಕಾಗಿದೆ.