ಬೆಂಗಳೂರು :ತೀವ್ರ ವಿರೋಧದ ನಡುವೆಯೂ ಜಾತಿ ಗಣತಿ ವರದಿ ಸಲ್ಲಿಕೆಯಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿಯಲ್ಲಿ ಒಟ್ಟು 13 ಪ್ರತಿಗಳಿವೆ. ಕಾಂತರಾಜ್ ವರದಿ ಸ್ವೀಕಾರ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಸ್ವೀಕರಿಸಿದ್ದೇನೆ. ಜಾತಿ ಗಣತಿ ವರದಿಯಲ್ಲಿ ಏನಿದೆ ಎಂದು ನಾನು ನೋಡಿಲ್ಲ. ಕ್ಯಾಬಿನೆಟ್ ನಲ್ಲಿ ಜಾತಿಗಣತಿ ವರದಿ ಚರ್ಚೆ ಮಾಡುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳತ್ತೇವೆ ಎಂದು ಹೇಳಿದರು.
ಜಾತಿಗಣತಿ ವರದಿ ಹಸ್ತಾಂತರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ಕಾಂತರಾಜು ಸಮಿತಿ 2014-15ರಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದತ್ತಾಂಶ ಸಂಗ್ರಹ ಮಾಡಿತ್ತು. ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ನಾವು ವರದಿ ಸಿದ್ಧಪಡಿಸಿದ್ದೇವೆ. ಜಾತಿಗಣತಿ ವರದಿಗೆ ಕಾರ್ಯದರ್ಶಿ, ಎಲ್ಲಾ ಸದಸ್ಯರು ಸಹಿಯೂ ಇದೆ. ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಜಾತಿಗಣತಿ ವರದಿಯನ್ನು ಓದದೇ ಅವೈಜ್ಞಾನಿಕ ಎಂದು ಹೇಗೆ ಹೇಳುತ್ತೀರಿ. ನಾವು ಸಿದ್ಧಪಡಿಸಿದ ಜಾತಿ ಗಣತಿಯ ವರದಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಂದ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಪ್ರತಿಗಳು ದೊಡ್ಡ ಸಂಪುಟಗಳಾಗಿವೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ.
2013 ರಿಂದ 2018 ರವರೆಗಿನ ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದ ಅವಧಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯನ್ನು ಮಾಡಿಸಲಾಗಿತ್ತು.
ಆದರೆ ಕಾರಣಂತರಗಳಿಂದ ಸರ್ಕಾರ ವರದಿ ಸ್ವೀಕರಿಸಿರಲಿಲ್ಲ. ಈ ಮಧ್ಯೆ ವರದಿ ಸೋರಿಕೆಯಾಗಿದ್ದು ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
154 ಕೋಟಿ ರೂ. ವೆಚ್ಚದಲ್ಲಿ ವರದಿ ತಯಾರಿಕೆ: ಬರೋಬ್ಬರಿ 154 ಕೋಟಿ ರೂ. ವೆಚ್ಚದಲ್ಲಿ ಈ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ ಸ್ವಪಕ್ಷೀಯ ನಾಯಕರು ಹಾಗೂ ಬಿಜೆಪಿ ನಾಯಕರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ವರದಿ ಸ್ವೀಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲೇ ಒಳ ಬೇಗುದಿ ಸೃಷ್ಟಿಸಿರುವ ಜಾತಿ ಗಣತಿ ಜ್ವಾಲೆ ಸ್ಫೋಟವಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.