ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಹೇಳಿದ್ದಿಷ್ಟು:
“ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಪ್ರಕರಣವನ್ನು ಸಿಬಿಐಗೆ ನೀಡಲು ಆಗುವುದಿಲ್ಲ ಎಂದು ಅಂದಿನ ಅಡ್ವೊಕೇಟ್ ಜನರಲ್ ಹೇಳಿದ್ದರು. ಅದರ ದಾಖಲೆಯನ್ನು ನಾನು ಮಾಹಿತಿ ಹಕ್ಕು ಮೂಲಕ ಪಡೆದಿದ್ದೇನೆ. ಯಡಿಯೂರಪ್ಪನವರ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದು ತಪ್ಪು. ಹೀಗಾಗಿ ನಮ್ಮ ಸರ್ಕಾರ ಅನುಮತಿ ಹಿಂಪಡೆದು ಲೋಕಾಯುಕ್ತಕ್ಕೆ ನೀಡಿದೆ.”
*ಅನುಮತಿ ಹಿಂಪಡೆದರೂ ನೋಟೀಸ್:*
“ಸರ್ಕಾರ ನನ್ನ ವಿರುದ್ಧದ ತನಿಖೆಯ ಅನುಮತಿ ಹಿಂಪಡೆದ ನಂತರವೂ ಸಿಬಿಐನವರು ನನ್ನ ಸಂಸ್ಥೆಗಳು ಹಾಗೂ ನನ್ನ ಜತೆ ವ್ಯವಹಾರ ಮಾಡಿರುವವರಿಗೆ ನೂರಾರು ನೋಟೀಸ್ ನೀಡುತ್ತಿದ್ದಾರೆ. ಯಾಕೆ ನೊಟೀಸ್ ನೀಡುತ್ತಿದ್ದಾರೋ ಗೊತ್ತಿಲ್ಲ.
ಪಿಆರ್ ಆರ್ ರಸ್ತೆಯನ್ನು ಎಕನಾಮಿಕ್ ಕಾರಿಡಾರ್ ಆಗಿ ಮಾರ್ಪಡಿಸಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್ :
“ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆಯನ್ನು ಎಕನಾಮಿಕ್ ಕಾರಿಡಾರ್ ಮಾದರಿಯಲ್ಲಿ ಮಾರ್ಪಾಡು ಮಾಡಿ, ಈ ಯೋಜನೆಯನ್ನು ಜಾರಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಗಮನ ಸೆಳೆವ ಸೂಚನೆ ಮೇಲಿನ ಚರ್ಚೆ ಸಂದರ್ಭದಲ್ಲಿ ಶೈಲೇಂದ್ರ ಬೆಲ್ದಾಳೆ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ಈ ಯೋಜನೆ ಮಾಡಲು ನಿರ್ಧರಿಸಿ 15 ವರ್ಷವಾಗಿದೆ. ಈ ಹಿಂದಿನ ಸರ್ಕಾರಗಳು ಈ ಯೋಜನೆ ಆರಂಭಿಸಲು ಪ್ರಯತ್ನಪಟ್ಟವು. ಆದರೆ ಟೆಂಡರ್ ನಲ್ಲಿ ಬಿಡ್ ಮಾಡಲು ಯಾರೂ ಮುಂದೆ ಬಾರದ ಕಾರಣ ಅವು ವಿಫಲವಾದವು. ಹೀಗಾಗಿ ಈಗ ಈ ಯೋಜನೆಗೆ ಹೊಸ ರೂಪ ನೀಡಿ ಪಿಪಿಪಿ ಮಾದರಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಈ ಯೋಜನೆಯ ಟೆಂಡರ್ ಕರೆಯಲಾಗಿದ್ದು, ಫೆ. 29 ರಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಯೋಜನೆಗೆ 2596 ಎಕರೆ ಪ್ರದೇಶ ಬೇಕಾಗಿದ್ದು, ಇದರಲ್ಲಿ 220 ಎಕರೆ ಮಾತ್ರ ಸರ್ಕಾರಿ ಜಮೀನಾಗಿದ್ದು, ಉಳಿದ ಜಮೀನು ಖಾಸಗಿಯದ್ದು.
ಈ ಜಮೀನಿಗೆ ಪರಿಹಾರ ನೀಡುವ ಬಗ್ಗೆ ನ್ಯಾಯಲಯದ ಆದೇಶ ಇದ್ದರೂ, ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ರೈತರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಯೋಜನೆ ಜಾರಿ ಮಾಡುತ್ತೇವೆಯೇ ಹೊರತು ಈ ಜಾಗವನ್ನು ಮತ್ತೆ ಡಿನೋಟಿಫೈ ಮಾಡುವುದಿಲ್ಲ ಎಂದು ನಾನು ರೈತರಿಗೆ ಹೇಳಿದ್ದೇನೆ. 24 ಸಾವಿರ ಕೋಟಿ ಹಣ ಈ ಯೋಜನೆಗೆ ಬೇಕಾಗಿದೆ ಎಂದು ಅಂದಾಜು ಮಾಡಲಾಗಿದೆ” ಎಂದರು.
*ಎತ್ತಿನಹೊಳೆ ಯೋಜನೆ ಶೀಘ್ರ ಜಾರಿ:*
ಇನ್ನು ಶಾಸಕ ಟಿ.ಬಿ ಜಯಚಂದ್ರ ಅವರು ಶಿರಾ ತಾಲೂಕಿನ 200 ಕೆರೆಗಳಿಗೆ ಹರಿಸಬೇಕು ಎಂದು ಗಮನ ಸೆಳೆದಾಗ, “ಈಗಾಗಲೇ ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರ ತಾಲೂಕುಗಳ ಅಂತರಜಲ ಅಭಿವೃದ್ಧಿಗೆ 4.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಶಿರಾ ತಾಲೂಕಿನ ಕೆರೆಗಳಲ್ಲಿ ಮಳೆ ನೀರು ಶೇಖರಣೆ ಕಷ್ಟವಾಗಿದ್ದು, ಈ ಭಾಗದ ಅಂತರ್ಜಲ ಮಟ್ಟ ಕುಸಿದಿದ್ದು ಹೀಗಾಗಿ ಈ ಭಾಗದ ಜನ ಫ್ಲೋರೈಡ್ ಗಳಿಂದ ಕೂಡಿದ ನೀರನ್ನು ಕುಡಿಯುವಂತಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಈ ಬಗ್ಗೆ ಅವರ ಜೊತೆ ಚರ್ಚೆ ಮಾಡಿ ಯೋಜನೆ ರೂಪಿಸುತ್ತೇವೆ. ಇನ್ನು ಎತ್ತಿನಹೊಳೆ ಯೋಜನೆ ನಮ್ಮ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಅದಷ್ಟು ಬೇಗ ಅದನ್ನು ಪೂರ್ಣಗೊಳಿಸುತ್ತೇವೆ” ಎಂದು ತಿಳಿಸಿದರು.
ಶಾಸಕ ರವಿ ಸುಬ್ರಮಣ್ಯ ಅವರು ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣದ ಜಾಗ ಜಮೀನಿನ ಮಾಲೀಕನ ಹೆಸರಿನಲ್ಲೇ ಇರುವುದರಿಂದ ಅನೇಕರು ಆ ಜಾಗದ ಮೇಲೆ ಸಾಲ ಪಡೆಯುತ್ತಿದ್ದಾರೆ. ಮುಂದೆ ಆ ಕಟ್ಟಡದ ಆಯಸ್ಸು ಮುಗಿದ ಮೇಲೆ, ಅಲ್ಲಿ ಮರುನಿರ್ಮಾಣದ ವೇಳೆ ಅಲ್ಲಿ ವಾಸವಿರುವ ನಿವಾಸಿಗಳಿಗೆ ಯಾವುದೇ ಹಕ್ಕಿರುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಕಾನೂನು ತರಬೇಕು ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಈ ವಿಚಾರವಾಗಿ ಈಗಾಗಲೇ ಕಾಯ್ದೆ ಇದೆ. ರೆಗ್ಯುಲರ್ ಡೆವಲಪರ್ಸ್ ಯಾರೂ ಈ ರೀತಿ ಮಾಡಲು ಹೋಗುವುದಿಲ್ಲ. ನನ್ನದೇ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣದ ನಂತರ ಜಮೀನಿನ ದಾಖಲೆಯನ್ನು ಅಲ್ಲಿನ ನಿವಾಸಿಗಳ ಅಸೋಸಿಯೇಷನ್ಗೆ ಹಸ್ತಾಂತರ ಮಾಡುತ್ತಾರೆ. ಅಕ್ರಮವಾಗಿ ನಿರ್ಮಾಣ ಮಾಡುವವರು ಈ ರೀತಿಯ ಕೆಲಸ ಮಾಡುತ್ತಿದ್ದಾರೆ. 2016ರ ನಂತರ ರೇರಾ ಬಂದಿದೆ. ಶಾಸಕರು ಹೇಳುತ್ತಿರುವಂತೆ ಕೆಲವರು ಈ ರೀತಿ ಮಾಡುತ್ತಿರಬಹುದು. ಅದಕ್ಕಾಗಿಯೇ ಬೆಂಗಳೂರಿನಲ್ಲಿ ನಾವು ಮತ್ತೆ ಆಸ್ತಿಗಳ ಸಮೀಕ್ಷೆ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳ ಅಸೋಸಿಯೇಷನ್ ಆ ಜಾಗದ ಮಾಲೀಕರಾಗುವಂತೆ ಕಾನೂನು ಮಾಡೋಣ” ಎಂದು ತಿಳಿಸಿದರು.
ಶಾಸಕ ಎಸ್ ಟಿ ಮಂಜು ಅವರು ಹೇಮಾವತಿ ಎಡದಂಡೆ ನಾಲೆಯ ಸರಪಳಿ 72.267 ರಿಂದ 214 ನೇ ಕಿ.ಮೀ. ವರೆಗೂ ಸ್ಟೋನ್ ಗಾರ್ಡ್ ಸಂಬಂಧದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಗಮನ ಸೆಳೆದಾಗ, “ಈ ವಿಚಾರವಾಗಿ ನನ್ನ ಇಲಾಖೆಯ ವರದಿಯಲ್ಲಿ ಅನುಮೋದಿತ ದರಪಟ್ಟಿಯಲ್ಲಿದ್ದ ಬಿಲ್ ಮಾತ್ರ ಪಾವತಿ ಮಾಡಲಾಗಿದೆ. ಇನ್ನು ಯಾವುದೇ ರೀತಿಯ ಕಳಪೆ ಕಾಮಗಾರಿ ಕಂಡು ಬಂದಿಲ್ಲ ಎಂದು ತಿಳಿಸಲಾಗಿದೆ. ಆದರೆ ಶಾಸಕರ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಒಂದು ಪ್ರತ್ಯೇಕ ತಂಡವನ್ನು ಕಳುಹಿಸಿ ಪರಿಶೀಲನೆ ಮಾಡುತ್ತೇವೆ. ಅಲ್ಲಿ ಏನಾದರೂ ಸಮಸ್ಯೆ ಇದ್ದರೆ ನ್ಯಾಯ ಒದಗಿಸಲಾಗುವುದು. ಈ ಅಕ್ರಮದ ಬಗ್ಗೆ ನಿಮ್ಮ ಬಳಿ ಯಾವುದಾದರೂ ದಾಖಲೆ ಇದ್ದರೆ ನಮಗೆ ನೀಡಿ. ಈ ಹಿಂದೆ ಈ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಕುಮಾರಸ್ವಾಮಿ ಅವರ ಬಳಿ ತಾಂತ್ರಿಕ ಸಲಹೆಗಾರರಾಗಿದ್ದ ವೆಂಕಟರಾಮ್ ಹಾಗೂ ಚನ್ನಬಸಪ್ಪ ಅವರ ಸಮಿತಿ ಈ ಬಗ್ಗೆ ತನಿಖೆ ಮಾಡಿ 2021 ರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿ ಮಾಡಿದ್ದಾರೆ. ಈಗ ನೀವು ಮತ್ತೆ ಅಕ್ರಮ ನಡೆದಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇದನ್ನು ಮತ್ತೆ ಮರುಪರಿಶೀಲನೆ ಮಾಡಿಸುತ್ತೇನೆ” ಎಂದು ತಿಳಿಸಿದರು.