ನವದೆಹಲಿ: ಬಾಂಗ್ಲಾದೇಶದ ನಿಕಟ ಪೂರ್ವ ಪ್ರಧಾನಿಯವರಿಗೆ ರಕ್ಷಣೆ ನೀಡಲು ಬ್ರಿಟನ್ ಇದುವರೆಗೆ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಅವರು ಸದ್ಯಕ್ಕೆ ಭಾರತದಲ್ಲಿ ಉಳಿಯುವ ಸಾಧ್ಯತೆ ಇದೆ.
ಮೀಸಲಾತಿ ಪ್ರತಿಭಟನೆ ಹಿಂಸಾರೂಪ ಪಡೆದ ಹಿನ್ನೆಲೆಯಲ್ಲಿ ಜೀವಭಯದಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಢಾಕಾ ತೊರೆದ ಬಾಂಗ್ಲಾದೇಶದ ಶೇಖ್ ಹಸೀನಾ ಇನ್ನೆರಡು ದಿನ ಭಾರತದಲ್ಲೇ ಉಳಿಯಲಿದ್ದಾರೆ. ಭಾರತದ ರಫೇಲ್ ಯುದ್ಧ ವಿಮಾನಗಳ ಬೆಂಗಾವಲಿನಲ್ಲಿ ಸೋಮವಾರ ಸಂಜೆ ನವದೆಹಲಿ ಬಳಿಯ ಹಿಂಡನ್ ವಾಯುನೆಲೆಗೆ ಸೇನಾ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಹಸೀನಾ ಅವರನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆಯಲ್ಲದೆ, ಭಿಗಿ ಭದ್ರತೆಯನ್ನೂ ನೀಡಲಾಗಿದೆ.
ಜೀವಭಯದಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ ಅವರು ಲಂಡನ್ಗೆ ತೆರಳಿ ಅಲ್ಲಿಯೇ ಜೀವಿಸುವ ಯೋಜನೆ ಹೊಂದಿದ್ದರು. ಆದರೆ ಹಸೀನಾ ಅವರು ಯಾವುದೇ ತನಿಖೆ ಎದುರಿಸುವ ಸನ್ನಿವೇಶ ಎದುರಾದರೆ, ಅದಕ್ಕೆ ಬ್ರಿಟನ್ ಸರ್ಕಾರ ಕಾನೂನಾತ್ಮಕ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಸ್ಪಷ್ಟ ಸಂದೇಶ ರವಾನಿಸಿದ ನಂತರ ಹಸೀನಾ ಅವರು ತಮ್ಮ ಯೋಜನೆಯನ್ನು ಒಂದೆರಡು ದಿನಗಳ ಮಟ್ಟಿಗೆ ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಂಡನ್ಗೆ ಹೋಗುವ ಯೋಜನೆಯನ್ನು ಭಾರತಕ್ಕೆ ತಿಳಿಸಿಯೇ ಅವಾಮಿ ಲೀಗ್ನ ನಾಯಕಿ ಹಸೀನಾ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದರು. ಆದರೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮ್ಮಿ, ಬಾಂಗ್ಲಾದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಹಿಂಸಾಚಾರಕ್ಕೆ ಹಲವು ಮುಗ್ಧರು ಬಲಿಯಾಗಿದ್ದಾರೆ. ಈ ಕುರಿತು ವಿಶ್ವಸಂಸ್ಥೆ ನೇತೃತ್ವದಲ್ಲಿ ಸ್ವತಂತ್ರ ಮತ್ತು ವಿಸ್ತ್ರತ ತನಿಖೆಯ ಅನಿವಾರ್ಯತೆ ಇದೆ ಎಂದಿದ್ದರಿಂದ ಹಸೀನಾ ಗೊಂದಲಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಅವರು ಭಾರತದಲ್ಲಿ ತಮ್ಮ ಪರಮಾಪ್ತ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿ ಇಲ್ಲಿ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.