ಮೈಸೂರು/ ಕಲ್ಬುರ್ಗಿ: ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಸದ್ಯದ ಮಾಹಿತಿ ಪ್ರಕಾರ 28,000 ಮತಗಳ ಎಣಿಕೆ ಮುಕ್ತಾಯವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಿವಮೊಗ್ಗದ ಧನಂಜಯ ಸರ್ಜಿ 9216 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ 4540 ಮತ್ತು ಶಿವಮೊಗ್ಗ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಆಯನೂರು ಮಂಜುನಾಥ 4540 ಮತ ಪಡೆದುಕೊಂಡಿದ್ದಾರೆ. ಇದೇ ಮುನ್ನಡೆ ಕಾಯ್ದುಕೊಂಡರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಧನಂಜಯ್ ಸರ್ಜಿ ಗೆಲ್ಲುವುದು ಬಹುತೇಕ ಖಚಿತವಾಗಿದೆ.
ಇನ್ನೊಂದಡೆ ಕಲ್ಯಾಣ ಕರ್ನಾಟಕ ಭಾಗ ಒಳಗೊಂಡಿರುವ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಇದೀಗ ಆರಂಭಿಕ ಮುನ್ನಡೆಯಲ್ಲಿದೆ. ಪ್ರಥಮ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ 4521 ಮತ ಪಡೆದುಕೊಂಡಿದ್ದು 306 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಹುಮನಾಬಾದ್ 4215 ಮತ, ಸ್ವತಂತ್ರ ಅಭ್ಯರ್ಥಿ ಎನ್. ಪ್ರತಾಪ್ ರೆಡ್ಡಿ 3037 ಮತ ಪಡೆದುಕೊಂಡಿದ್ದಾರೆ.