ನವದೆಹಲಿ : 19 ವರ್ಷದೊಳಗಿನ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್ನಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಇತಿಹಾಸ ರಚಿಸಿದೆ. ಈ ಸುದ್ದಿ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳೆಯರ ತಂಡಕ್ಕೆ ದೊಡ್ಡ ಮೊತ್ತದ ಘೋಷಣೆ ಮಾಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವಿಶ್ವಕಪ್ ಗೆದ್ದಿರುವ 19 ವರ್ಷದೊಳಗಿನ ಮಹಿಳೆಯರ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ₹5 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಇದೇ ಮೊದಲ ಆಯೋಜನೆಗೊಂಡಿರುವ ಐಸಿಸಿ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಎತ್ತಿ ಹಿಡಿದಿದೆ. ಇದು ಭಾರತೀಯ ಮಹಿಳಾ ಕ್ರಿಕೆಟ್ ಪಾಲಿಗೆ ಹೊಸ ಆಶಾಕಿರಣವಾಗಿದೆ. ಬರುವ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಗೆ ಇದು ಸ್ಪೂರ್ತಿಯಾಗಿದ್ದು ಈ ನಿಟ್ಟಿನಲ್ಲಿ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ದೊಡ್ಡ ಮೊತ್ತವನ್ನು ನೀಡುವುದಾಗಿ ಘೋಷಿಸಿದೆ.
ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 17.1 ಓವರ್ಗಳಲ್ಲಿ 68 ರನ್ ಗಳಿಸಿ ಆಲೌಟ್ ಆಯಿತು.
69 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ 14 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.