ಲಖನೌ:
ಭಾರತ ವಿರುದ್ಧದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಹಿನ್ನಡೆ ಅನುಭವಿಸಿತು.
ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ನ್ಯೂಜಿಲೆಂಡ್ ಎದುರಿನ ಚುಟುಕು ಕ್ರಿಕೆಟ್ ಸರಣಿ ಜಯಿಸುವ ಗುರಿ ಈಡೇರಬೇಕಾದರೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೂ ಭಾರತೀಯ ಬೌಲರ್ ಗಳು ಇಂದು ಪೂರ್ಣ ಹಿಡಿತ ಸಾಧಿಸಿ ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ಗಳನ್ನು ಪರದಾಡುವಂತೆ ಮಾಡಿದರು.
ಮಿಚೆಲ್ ಸ್ಯಾಂಟ್ನರ್ 20 ರನ್ ಗಳಿಸಿದ್ದು ಬಿಟ್ಟರೆ ನ್ಯೂಜಿಲೆಂಡಿನ ಯಾವೊಬ್ಬ ಬ್ಯಾಟ್ಸ್ ಮನ್ ಗಳು 14 ರನ್ ಗಳಿಗಿಂತ ಹೆಚ್ಚು ಬಾರಿಸಲು ಸಾಧ್ಯವಾಗಲಿಲ್ಲ. ಆ ಮಟ್ಟದಲ್ಲಿ ಭಾರತೀಯ ಬೌಲರ್ ಗಳು ಇಂದು ಬಿಗಿಹಿಡಿತ ಸಾಧಿಸಿದರು. ಮೊದಲ ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡಿ ಭಾರತದ ಸೋಲಿಗೆ ಕಾರಣರಾಗಿದ್ದ ಆರ್ಷದೀಪ ಸಿಂಗ್ ಅವರು ಪಂದ್ಯದ ಕೊನೆಯಲ್ಲಿ ಬೌಲಿಂಗ್ ನಡೆಸಿದರು. ತಮ್ಮ ಚೊಚ್ಚಲ ಓವರ್ ನಲ್ಲಿ ಎರಡು ವಿಕೆಟ್ ಪಡೆದುಕೊಂಡರು. ಅವರು ಎರಡು ಓವರ್ ಬೌಲಿಂಗ್ ನಡೆಸಿ 8 ರನ್ ನೀಡಿ ಎರಡು ವಿಕೆಟ್ ಪಡೆದು ಮಿಂಚಿದರು. ನ್ಯೂಜಿಲ್ಯಾಂಡ್ ಇಂದು 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿತು.
ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ಈಗ 1–0ಯ ಮುನ್ನಡೆಯಲ್ಲಿದೆ. ರಾಂಚಿಯಲ್ಲಿ ಶುಕ್ರವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಆತಿಥೇಯ ತಂಡವು 21 ರನ್ಗಳಿಂದ ಸೋತಿತ್ತು.
ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ.