ಪಾಟ್ನಾ: ಬಿಹಾರ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಯ ನಾಯಕರೊಬ್ಬರು ಮುಖ್ಯಮಂತ್ರಿ ಪಟ್ಟಕ್ಕೇರುವುದು ಈಗ ಅಧಿಕೃತಗೊಂಡಿದೆ. ಬಿಜೆಪಿಯ ಹಿರಿಯ ನಾಯಕ ಸಾಮ್ರಾಟ ಚೌಧರಿ(57) ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಮೂಲಗಳ ಪ್ರಕಾರ, ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭವು ಬುಧವಾರ (ಏ.15 ) ನಡೆಯುವ ಸಾಧ್ಯತೆಯಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಸುದೀರ್ಘ ಕಾಲದ ಮುಖ್ಯಮಂತ್ರಿಯಾಗಿದ್ದ ನಿತೀಶಕುಮಾರ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ನಿತೀಶಕುಮಾರ, ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಈಗ ಹೊಸ ಸರ್ಕಾರ ಬಿಹಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳಲಿದೆ. ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಹೊಸ ಸರ್ಕಾರಕ್ಕೆ ಇರಲಿದೆ,” ಎಂದು ತಿಳಿಸಿದ್ದಾರೆ.
ಯಾರು ಈ ಸಾಮ್ರಾಟ ಚೌಧರಿ?
57 ವರ್ಷದ ಸಾಮ್ರಾಟ ಚೌಧರಿ ನಿತೀಶಕುಮಾರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಹಿಂದುಳಿದ ವರ್ಗದ (OBC) ಪ್ರಭಾವಿ ‘ಕುಶ್ವಾಹ’ (ಕೋಯಿರಿ) ಸಮುದಾಯಕ್ಕೆ ಸೇರಿದವರು. ಯಾದವರ ನಂತರ ಬಿಹಾರದಲ್ಲಿ ಈ ಸಮುದಾಯವೇ ಅತಿ ದೊಡ್ಡದಾಗಿದೆ. ಜೆಡಿಯು ಬೇಡಿಕೆಯ ಮೇರೆಗೆ ಬಿಜೆಪಿ ಇವರನ್ನು ಈ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿದೆ ಎನ್ನಲಾಗಿದೆ.
1990ರಲ್ಲಿ ರಾಜಕೀಯ ಪ್ರವೇಶಿಸಿದ ಚೌಧರಿ, ಲಾಲು ಪ್ರಸಾದ ಯಾದವ್ ಅವರ ಆರ್ಜೆಡಿ ಮತ್ತು ನಿತೀಶ ಅವರ ಜೆಡಿಯು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು. 2017ರಲ್ಲಿ ಅವರು ಬಿಜೆಪಿಯನ್ನು ಸೇರಿದರು.
ಬಿಜೆಪಿಯ ಕಾಯುವಿಕೆಗೆ ಅಂತ್ಯ
2005ರಿಂದಲೂ ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟದ ಕಿರಿಯ ಪಾಲುದಾರನಾಗಿಯೇ ಇತ್ತು. ಕೆಲವು ವರ್ಷಗಳನ್ನು ಹೊರತುಪಡಿಸಿದರೆ, ಪಕ್ಷವು ಅಧಿಕಾರಕ್ಕಾಗಿ ನಿತೀಶಕುಮಾರ ಅವರನ್ನೇ ಅವಲಂಬಿಸಿತ್ತು. ಆದರೆ ಈಗ ಮೊದಲ ಬಾರಿಗೆ ಸ್ವತಃ ಬಿಜೆಪಿಯ ನಾಯಕನೇ ಮುಖ್ಯಮಂತ್ರಿ ಪೀಠವನ್ನು ಅಲಂಕರಿಸುತ್ತಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿಯ 89 ಶಾಸಕರಿದ್ದರೆ, ನಿತೀಶಕುಮಾರ ನೇತೃತ್ವದ ಜೆಡಿಯು 85 ಶಾಸಕರನ್ನು ಹೊಂದಿದೆ.
ಸಾಮ್ರಾಟ್ ಚೌಧರಿ, ರಾಜ್ಯದ ಪ್ರಮುಖ ಹಿಂದುಳಿದ ವರ್ಗ (ಒಬಿಸಿ) ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರಾಗಿದ್ದಾರೆ.
ಹಿಂದುಳಿದ ಜಾತಿಗಳಲ್ಲಿ, ಯಾದವರ ನಂತರ ಕುಶ್ವಾಹ ಸಮುದಾಯವು ಅತಿ ದೊಡ್ಡದಾಗಿದೆ. ಮೂಲಗಳ ಪ್ರಕಾರ, ಜೆಡಿಯು ಈ ಜಾತಿಯ ಗುಂಪಿನಿಂದಲೇ ಮುಖ್ಯಮಂತ್ರಿಯನ್ನು ನೇಮಿಸುವಂತೆ ಬಿಜೆಪಿಯನ್ನು ಕೇಳಿಕೊಂಡಿತ್ತು.
ಸುಮಾರು ಏಳು ವರ್ಷಗಳ ಹಿಂದೆ ಅವರು ಬಿಜೆಪಿ ಸೇರಿದಾಗಿನಿಂದ ಪಕ್ಷದೊಳಗೆ ಚೌಧರಿ ತ್ವರಿತವಾಗಿ ಬೆಳವಣಿಗೆ ಕಂಡವರು.
ಬಿಹಾರದ ಹಿರಿಯ ನಾಯಕ ಶಕುನಿ ಚೌಧರಿ ಅವರ ಪುತ್ರಗಿರುವ ಸಾಮ್ರಾಟ್, 1990ರಲ್ಲಿ ರಾಜಕೀಯ ಪ್ರವೇಶಿಸಿದರು. 19989ರಲ್ಲಿ ರಾಬ್ರಿ ದೇವಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದರು. 2000 ಮತ್ತು 2010ರಲ್ಲಿ ಪರ್ಬಟ್ಟಾ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2025 ರಲ್ಲಿ ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಅವರು ಬಿಹಾರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮರು ನೇಮಕಗೊಂಡರು.
ಆರ್ ಜೆಡಿ-ಜೆಡಿಯು-ಬಿಜೆಪಿ
ಸಾಮ್ರಾಟ್ ಚೌಧರಿಯವರ ರಾಜಕೀಯ ಜೀವನವು ಬಹು ಪಕ್ಷಗಳನ್ನು ವ್ಯಾಪಿಸಿದೆ. ರಾಬ್ರಿ ದೇವಿ ನೇತೃತ್ವದ ರಾಷ್ಟ್ರೀಯ ಜನತಾ ದಳ ಸರ್ಕಾರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, 2014 ರಲ್ಲಿ ಬಂಡಾಯ ಬಣವನ್ನು ಸೇರಿದರು, ನಿತೀಶ್ ಕುಮಾರ್ ರಾಜೀನಾಮೆ ನೀಡಿದ ನಂತರ ಜಿತನ್ ರಾಮ್ ಮಾಂಝಿ ನೇತೃತ್ವದ ಜೆಡಿ(ಯು) ಸರ್ಕಾರದ ಭಾಗವಾದರು. ನಂತರ ಅವರು ಜೆಡಿ(ಯು) ತೊರೆದು 2017 ರಲ್ಲಿ ಬಿಜೆಪಿ ಸೇರಿದರು, ಅಲ್ಲಿ ಅವರು ಶೀಘ್ರವಾಗಿ ಉನ್ನತ ಹುದ್ದೆಗೆ ಏರಿದರು.
ಬಿಜೆಪಿ ಸೇರಿದ ಸಾಮ್ರಾಟ್ ಚೌಧರಿ ಅವರನ್ನು ರಾಜ್ಯ ಉಪಾಧ್ಯಕ್ಷ ಮಾಡಲಾಯಿತು. ನಂತರ ಅವರನ್ನು ವಿಧಾನ ಪರಿಷತ್ತಿಗೆ ಸೇರಿಸಲಾಯಿತು. 2020 ರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲುವಿನ ನಂತರ ಅವರು ಕುಮಾರ್ ಅವರ ಸರ್ಕಾರದಲ್ಲಿ ಸಚಿವರಾದರು.
2023ರ ಮಾರ್ಚ್ ನಲ್ಲಿ ಅವರನ್ನು ಬಿಹಾರ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಆಕ್ರಮಣಕಾರಿ ರಾಜಕೀಯ ಶೈಲಿಗೆ ಹೆಸರುವಾಸಿಯಾದ ಚೌಧರಿ, ಸಾಂಕೇತಿಕ ಪೇಟವನ್ನು ಧರಿಸಿದ್ದರು. ನಿತೀಶ್ ಕುಮಾರ್ ಅವರ ತೀವ್ರ ಟೀಕಾಕಾರ ಎಂದೇ ಕರೆಯಲ್ಪಡುತ್ತಿದ್ದ ಅವರು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದ ನಂತರವೇ ತಾನು ಪೇಟ ತೆಗೆದುಹಾಕುವುದಾಗಿ ಪ್ರತಿಜ್ಞೆ ಮಾಡಿದ್ದರು. ಜುಲೈ 2024 ರಲ್ಲಿ ನಿತೀಶ್ ಕುಮಾರ್ ಎನ್ಡಿಎಗೆ ಮತ್ತೆ ಸೇರಿದ ನಂತರ ಅವರು ಅಯೋಧ್ಯೆಯಲ್ಲಿ ತನ್ನ ಪೇಟ ತೆಗೆದರು.
ಸಾಮ್ರಾಟ್ ಚೌಧರಿ ಅವರು ರಾಜಕೀಯ ಜೀವನ ಟೀಕೆಗಳಿಂದ ಮುಕ್ತವಾಗಿಲ್ಲ. ಹಲವು ಪಕ್ಷಗಳನ್ನು ದಾಟಿ ಬಂದ ಅವರು ಸಂಘ ಪರಿವಾರದ ದೀರ್ಘಕಾಲೀನ ಸದಸ್ಯರಲ್ಲ ಎಂದು ಮೂಲ ಬಿಜೆಪಿಗರು ಮಾತನಾಡುವುದು ಇದೆ.
ಹಿಂದಿನಿಂದಲೂ ನಿತೀಶ್ ಕುಮಾರ್ ಅವರನ್ನು ಟೀಕೆ ಮಾಡುತ್ತಲೇ ರಾಜಕೀಯ ಮಾಡುತ್ತಲೇ ಬಂದ ಸಾಮ್ರಾಟ್ ಚೌಧರಿ ಇದೀಗ ನಿತೀಶ್ ಕುಮಾರ್ ಅವರು ಎರಡು ದಶಕದ ಅಧಿಕಾರವನ್ನು ಕೊನೆಗೊಳಿಸಿ ಸಿಎಂ ಪಟ್ಟಕ್ಕೇರಿದ್ದಾರೆ.


