ಬೆಳಗಾವಿ : ಮಂಗಳೂರಿನ ಜೋಕಟ್ಟೆಯಲ್ಲಿ 14 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ ಎಂಬ ವಿಚಾರವನ್ನು ಇದೀಗ ಪೊಲೀಸರು ತನಿಖೆ ವೇಳೆ ಪತ್ತೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆ ಹಂಚಿನಾಳ ಗ್ರಾಮದ ಫಕೀರಪ್ಪ ಹಣಮಪ್ಪ ಮಾದರ (51) ಬಂಧಿತ ವ್ಯಕ್ತಿ. ಈತ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮಂಗಳವಾರ ಬೆಳಗ್ಗೆ 14 ವರ್ಷದ ಬಾಲಕಿ ಒಬ್ಬಂಟಿ ಇರುವುದನ್ನು ತಿಳಿದು ಆಕೆಯನ್ನು ಬಲವಂತದಿಂದ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕುತ್ತಿಗೆಗೆ ಬಡ್ಟೆ ಬಿಗಿದು ಹಿಸುಕಿ ಕೊಲೆ ಮಾಡಿದ್ದಾನೆ.
ಬಾಲಕಿ ಕೊಣಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕೈ ನೋವಿನ ಚಿಕಿತ್ಸೆಗಾಗಿ ಜೋಕಟ್ಟೆಯಲ್ಲಿರುವ ತನ್ನ ಚಿಕ್ಕಪ್ಪ ಹನುಮಂತು ಅವರ ಮನೆಗೆ ಬಂದು ತಂಗಿದ್ದಳು.
ಚಿಕ್ಕಪ್ಪ ಹನುಮಂತು
ಮತ್ತು ಮನೆಯಲ್ಲಿದ್ದ ಇತರರು ಕೆಲಸಕ್ಕೆ ಹೋಗಿದ್ದರು. ಬಾಲಕಿ ಒಬ್ಬಂಟಿಯಾಗಿ ಇದ್ದಳು. ಆಗ ಆತ ಈ ಹೀನಾಯ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ.
ಘಟನೆ ನಡೆದ ನಂತರ ಬೆಳಗಾವಿ ಜಿಲ್ಲೆಯಲ್ಲಿರುವ ಬಾಲಕಿಯ ತಾಯಿ ಬಾಲಕಿಯಿರುವ ಮಂಗಳೂರಿನ ಪಕ್ಕದ
ಮನೆಯವರಿಗೆ ಫೋನ್ ಮಾಡಿ ಮಗಳಿಗೆ ಕೊಡುವಂತೆ
ಹೇಳಿದ್ದರು. ಪಕ್ಕದ ಮನೆಯವರು ಫೋನ್ ಕೊಡಲು ಬಂದು ನೋಡಿದಾಗ
ಆಕೆಯ ಕುತ್ತಿಗೆ ಬಿಗಿದು ಕೊಲೆಗೈದ ಸ್ಥಿತಿಯಲ್ಲಿ
ಪತ್ತೆಯಾಗಿದ್ದಳು. ಬಾಲಕಿ ಕುಟುಂಬಸ್ಥರು ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದವರು.
ಕೊನೆಗೆ ದೂರಿನ ಮೇರೆಗೆ ಮಂಗಳೂರಿನ
ಪಣಂಬೂರು ಪೊಲೀಸರು ಮೇಲ್ನೋಟಕ್ಕೆ ಇದು ಯಾರೋ ಕೊಲೆಗೈದಿರುವುದನ್ನು ತಿಳಿದು ಕೊಲೆ ಪ್ರಕರಣ ದಾಖಲಿಸಿದ್ದರು. ಆಸುಪಾಸಿನವರನ್ನು ವಿಚಾರಣೆ ನಡೆಸಿದಾಗ, ಕೊಲೆ ಸುಳಿವು ಸಿಕ್ಕಿತ್ತು. ವಿಚಾರಣೆ ನಡೆಸಿದಾಗ ಆರೋಪಿ ಫಕೀರಪ್ಪ ಕೃತ್ಯ ಎಸಗಿರುವುದು ಕಂಡುಬಂದಿದೆ. ಫಕೀರಪ್ಪ ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ಕೂಲಿ ಮಾಡಿಕೊಂಡಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು 51 ವರ್ಷದ ಈ ಆರೋಪಿತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.