ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಕರ್ನಾಟಕದ ಎಚ್.ಡಿ. ಕುಮಾರಸ್ವಾಮಿ ಅವರು ಲೋಕಸಭೆಯ ಸದಸ್ಯರಾಗಿ ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ’18ನೇ ಲೋಕಸಭೆಯ ಸದಸ್ಯನಾಗಿ, ಮಂಡ್ಯ ಮಹಾಜನತೆಯ ಪ್ರತಿನಿಧಿಯಾಗಿ ಗೌರವಾನ್ವಿತ ಹಂಗಾಮಿ ಸಭಾಧ್ಯಕ್ಷರಾದ ಭರ್ತೃಹರಿ ಮಹತಾಬ್ ಅವರ ಸಮಕ್ಷಮದಲ್ಲಿ ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದೆ. ಇದು ನನ್ನ ಬದುಕಿನ ಅವಿಸ್ಮರಣೀಯ, ಹೆಮ್ಮೆಯ ಕ್ಷಣ. ಭಾರತದ ಪ್ರಜಾಪ್ರಭುತ್ವ ದೇಗುಲದಲ್ಲಿ ಈ ಧನ್ಯತೆಯ ಕ್ಷಣಕ್ಕೆ ಕಾರಣೀಭೂತರಾದ ಮಂಡ್ಯ ಲೋಕಸಭೆ ಕ್ಷೇತ್ರದ ಎಲ್ಲಾ ತಂದೆ ತಾಯಂದಿರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಹಾಗೂ ಸಮಸ್ತ ಕನ್ನಡಿಗರಿಗೆ ಅನಂತ ಧನ್ಯವಾದಗಳನ್ನು ಅರ್ಪಣೆ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ತು ಪ್ರವೇಶಿಸಿದ್ದ ಅವರು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದಾರೆ.