ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಮಾ.18) ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಪ್ರಧಾನಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ರಾಜ್ಯ ಬಿಜೆಪಿ ನಾಯಕರು ತಯಾರಿ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಬೃಹತ್ ವೇದಿಕೆಗೆ ವಾಹನದ ಮೂಲಕ ಕರೆತರಲು ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಯುವಕರು, ಮಹಿಳೆಯರು, ರೈತರು ಸೇರಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಸುತ್ತಮುತ್ತಲ ಜಿಲ್ಲೆಗಳಿಂದ ಸಾರ್ವಜನಿಕರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
5 ಲೋಕಸಭಾ ಕ್ಷೇತ್ರಗಳ ಸಂಸದರು ಭಾಗಿ
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ ಮತ್ತು ಚಿಕ್ಕಮಗಳೂರಿನ ಅಭ್ಯರ್ಥಿಗಳು ವೇದಿಕೆ ಮೇಲೆ ಇರಲಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ, ದಾವಣಗೆರೆಯ ಸಂಸದ ಸಿದ್ದೇಶ್ವರ್, ಗಾಯತ್ರಿ ಸಿದ್ದೇಶ್ವರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವೇದಿಕೆಯಲ್ಲಿ ಇರುತ್ತಾರೆ. ಮಂಗಳೂರಿನ ಅಭ್ಯರ್ಥಿ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ.
ವೇದಿಕೆಯಲ್ಲಿರುವ ಗಣ್ಯರು
ಪ್ರಧಾನಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಸಿ.ಟಿ. ರವಿ, ಮಾಜಿ- ಹಾಲಿ ಶಾಸಕರು ವೇದಿಕೆಯಲ್ಲಿ ಇರುತ್ತಾರೆ.
ವಾಹನದ ಮೂಲಕ ವೇದಿಕೆಯತ್ತ ತೆರಳುವ ಮೋದಿ
ಶಿವಮೊಗ್ಗದ ಈ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶಿಷ್ಟ ರೀತಿಯಲ್ಲಿ ವೇದಿಕೆಗೆ ಕರೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ. ಅಂದರೆ ಪ್ರಧಾನಿ ಮೋದಿಯವರು ತೆರೆದ ವಾಹನದಲ್ಲಿ ಬೃಹತ್ ಪೆಂಡಾಲ್ನ ಮಧ್ಯಭಾಗದಿಂದ ಸಾಗಲಿದ್ದು, ಸಮಾವೇಶದಲ್ಲಿ ಸೇರಿರುವ ಜನರತ್ತ ಕೈಬೀಸಿ ಸಾಗಲಿದ್ದಾರೆ. ಹೀಗಾಗಿ ನಾಗರಿಕರು ವೇದಿಕೆ ಸಮೀಪದಲ್ಲಿಯೇ ಮೋದಿಯವರನ್ನು ನೋಡಬಹುದಾಗಿದೆ.
ಭಾನುವಾರ (ಮಾ. 17) ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ರಾಜ್ಯದಲ್ಲಿ 28ಕ್ಕೆ 28 ಸೀಟು ಗೆಲ್ಲುವುದರ ಕಡೆ ಪಕ್ಷ ಗಮನ ಕೊಡಲಿದೆ. ಸಾರ್ವಜನಿಕರು ಈ ಸಭೆಯನ್ನು ಯಶಸ್ವಿಯಾಗಿ ಮಾಡಬೇಕು. ವಿಕಸಿತ ಭಾರತ ಸಂಕಲ್ಪಕ್ಕೆ ಜನರು ಸ್ಪಂದಿಸಲು ಮನವಿ ಮಾಡಿದರು. ಇವತ್ತು ಹೋಗಿ ಈಶ್ವರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಎನ್. ರವಿಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.