ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಧಿಕಾರಿಗಳು ಮಾಡಿದ ತಪ್ಪಿನಿಂದ ಮುಖ್ಯಮಂತ್ರಿ ಕಚೇರಿ ಪೇಚಿಗೆ ಒಳಗಾಗಬೇಕಾಗಿತ್ತು. ಮುಖ್ಯಮಂತ್ರಿ ಕಚೇರಿ ಮಾಡಿದ ಈ ತಪ್ಪಿಗೆ ಶಿರಸಿಯ ಆಡಳಿತ ನೇರ ಹೊಣೆಯಾಗಿದೆ. ಶಿರಸಿ ತಾಲೂಕಿನ ಅಧಿಕಾರಿಗಳು ಈ ಬಗ್ಗೆ ಬೆಂಗಳೂರು ಸಿಎಂ ಕಚೇರಿಗೆ ಸಮರ್ಪಕ ಮಾಹಿತಿ ನೀಡಿದ್ದರೆ ಇಂತಹ ಅವಾಂತರ ಸಂಭವಿಸುತ್ತಿರಲಿಲ್ಲ. ಕದಂಬೋತ್ಸವ ಆಚರಣೆ ಈ ಬಾರಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು ಸಂಬಂಧಿಸಿದ ಅಧಿಕಾರಿಗಳ ತಲೆದಂಡವಾಗುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರು : ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ಆರಂಭಗೊಂಡಿದ್ದು, ಇಂದು ಕೊನೆಗೊಳ್ಳಲಿದೆ. ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಸಿಎಂ ಕಚೇರಿ, ಬನವಾಸಿಯು ಉತ್ತರ ಕನ್ನಡ ಜಿಲ್ಲೆಯ ಎಂದು ಹೇಳುವ ಬದಲು ಶಿವಮೊಗ್ಗ ಜಿಲ್ಲೆಯಲ್ಲಿದೆ ಎಂದು ಎಕ್ಸ್ ಖಾತೆಯಲ್ಲಿ ತಪ್ಪಾಗಿ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದೆ. ಕನ್ನಡದ ಆದಿ ಕವಿ ವರ್ಣಿಸಿದ್ದ ಬನವಾಸಿಯು ಯಾವ ಜಿಲ್ಲೆಯ ಯಾವ ತಾಲೂಕಿನಲ್ಲಿದೆ ಎಂದು ಸಿಎಂ ಕಚೇರಿ ಸಿಬ್ಬಂದಿಗೇ ತಿಳಿದಿಲ್ಲ ಎನ್ನುವುದು ವಿಷಾದನೀಯ ಸಂಗತಿ.
ಮುಖ್ಯಮಂತ್ರಿ ಕಾರ್ಯಕ್ರಮಗಳ ವಿವರಗಳು ಮತ್ತು ಮುಖ್ಯಮಂತ್ರಿಗಳ ಹೇಳಿಕೆ, ಆದೇಶಗಳನ್ನು ತಿಳಿಸಲು ಬಳಸುವ ಅಧಿಕೃತ ಎಕ್ಸ್ ಖಾತೆಯಲ್ಲಿ (ಟ್ವಿಟರ್), ಬನವಾಸಿ ಕದಂಬೋತ್ಸವದ ನೇರಪ್ರಸಾರದ ಬಗ್ಗೆ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಮಾಡುವಾಗ ಸಿಬ್ಬಂದಿ ಮಾಡಿದ ಎಡವಟ್ಟೇನೆಂದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಎಂದು ಹೇಳುವ ಬದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನವಾಸಿ ಎಂದು ತಪ್ಪಾಗಿ ಬರೆದುಕೊಳ್ಳಲಾಗಿದೆ.
“ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ಸಿಎಂ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇದಾದ ಕೆಲ ಹೊತ್ತಿನ ಬಳಿಕ ಪ್ರಮಾದದಿಂದ ಎಚ್ಚೆತ್ತ ಸಿಬ್ಬಂದಿ, ತಪ್ಪನ್ನು ಸರಿಪಡಿಸಿದ್ದಾರೆ. “ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕದಂಬೋತ್ಸವದ ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ” ಎಂದು ತಿಳಿಸಿದ್ದಾರೆ.