ನವದೆಹಲಿ: ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ದಿನಾಂಕ ಯಾವಾಗ ಘೋಷಣೆಯಾಗಬಹುದು ಎಂಬ ಬಗ್ಗೆ ಭಾರೀ ಕುತೂಹಲ ಇದೆ.
ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ನಿರೀಕ್ಷೆ ಇದೆ. ಮಾ.13ರ ಬಳಿಕ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.
ಚುನಾವಣೆ ಆಯೋಗ ಇಷ್ಟರಲ್ಲೇ
ಉತ್ತರ ಪ್ರದೇಶ ಹಾಗೂ ಜಮ್ಮು- ಕಾಶ್ಮೀರಕ್ಕೆ ತೆರಳಲಿದೆ. ಈ ಭೇಟಿಗಳು ಮುಗಿದ ಬಳಿಕ ದಿನಾಂಕ ಪ್ರಕಟ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 2014ರಲ್ಲಿ ಮಾ.5ಕ್ಕೆ ಚುನಾವಣೆ ಹಾಗೂ 2019 ಮಾ.10 ಕ್ಕೆ ಚುನಾವಣೆ ಘೋಷಣೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಮಾ.3 ರಂದು ಮಂತ್ರಿ ಪರಿಷತ್ ಸಭೆ ಕರೆದಿದ್ದು, ಅದರಲ್ಲಿ ಚುನಾವಣೆಯ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.
2019ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾರ್ಚ್ 10ರಂದು ವೇಳಾಪಟ್ಟಿಯನ್ನು ಘೋಷಿಸಿತ್ತು. 543 ಸ್ಥಾನಗಳ ಲೋಕಸಭೆಗೆ ಮತದಾನ ಏಪ್ರಿಲ್ 11 ಮತ್ತು ಮೇ 19 ರ ನಡುವೆ ಏಳು ಹಂತಗಳಲ್ಲಿ ನಡೆದಿತ್ತು. ಮೇ 23 ರಂದು ಮತ ಎಣಿಕೆ ನಡೆದಿತ್ತು.
ಹೆಚ್ಚುವರಿಯಾಗಿ 2019 ರಲ್ಲಿ ಸುಮಾರು 91.2 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರು, ಅವರಲ್ಲಿ 67% ಕ್ಕಿಂತ ಹೆಚ್ಚು ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ದತ್ತಾಂಶಗಳ ಪ್ರಕಾರ, ಈ ವರ್ಷ ಸುಮಾರು 97 ಕೋಟಿ ಜನರು ಮತದಾನಕ್ಕೆ ಅರ್ಹರರಾಗಿದ್ದಾರೆ.
ಸಾರ್ವತ್ರಿಕ ಲೋಕಸಭಾ ಚುನಾವಣೆಯೊಂದಿಗೆ ಈ ವರ್ಷ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ವಿಧಾನ ಸಭಾ ಚುನಾವಣೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಚುನಾವಣೆ ಸಿದ್ಧತೆ ಪರಿಶೀಲನೆ ಸಲುವಾಗಿ ಆಯೋಗ ಈಗಾಗಲೇ ಹಲವಾರು ರಾಜ್ಯಗಳಿಗೆ ಭೇಟಿ ನೀಡುತ್ತಿದೆ. ಆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದಿನಾಂಕ ಘೋಷಿಸ ಲಾಗುತ್ತದೆ. ಸದ್ಯ ತಮಿಳುನಾಡಿನಲ್ಲಿ ಆಯೋಗ ಪರಿಶೀಲನೆ ಸಭೆ ನಡೆಸುತ್ತಿದೆ.