ಬೆಳಗಾವಿ :
2023-24 ನೇ ಸಾಲಿನ ರಣಜಿ ಕ್ರಿಕೆಟ್ ಪಂದ್ಯಾವಳಿಗೆ 16 ಸದಸ್ಯರ ಕರ್ನಾಟಕ ತಂಡದಲ್ಲಿ ಬೆಳಗಾವಿ ಮೂಲದ ಆಲ್ ರೌಂಡರ್ ಸುಜಯ್ ಸಂಜಯ ಸಾತೇರಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ತಂಡ ಜನವರಿ 5 ರಿಂದ ಹುಬ್ಬಳ್ಳಿಯಲ್ಲಿ ಪಂಜಾಬ್ ವಿರುದ್ಧ ಈ ಸಾಲಿನ ತನ್ನ ಮೊದಲ ರಣಜಿ ಪಂದ್ಯವನ್ನು ಆಡಲಿದೆ.
ಸುಜಯ್ ಸಾತೇರಿ ಬೆಳಗಾವಿಯ ಮಜಗಾವಿ ನಿವಾಸಿ. ಬಾಲ್ಯದಿಂದಲೇ ಕ್ರಿಕೆಟ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಇದೀಗ ದೇಶದ ಪ್ರತಿಷ್ಠಿತ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಕರ್ನಾಟಕ ರಣಜಿ ತಂಡದಲ್ಲಿ ಬ್ಯಾಟ್ಸ್ಮನ್ ಬೆಳಗಾವಿ ಶೇರಿಗಲ್ಲಿಯ ದೀಪಕ ಚೌಗುಲೆ ಹಾಗೂ ವೇಗದ ಬೌಲರ್ ರೋನಿತ್ ಮೋರೆ ಆಯ್ಕೆಯಾಗಿ ಗಮನಸೆಳೆದಿದ್ದರು.
ದೀಪಕ್ ಚೌಗುಲೆ ಅವರು ಅಂಡರ್-19 ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 1997 ರಲ್ಲಿ ಚೆನ್ನೈನಲ್ಲಿ ನಡೆದ ಅಂಡರ್-13 ಪಂದ್ಯಾವಳಿಯಲ್ಲಿ ಜೂನಿಯರ್ ಮಟ್ಟದಲ್ಲಿ ರಾಜ್ಯಕ್ಕೆ ಪಾದಾರ್ಪಣೆ ಮಾಡಿದರು. ಗೋವಾ ವಿರುದ್ಧದ ಅವರು ಚೊಚ್ಚಲ ಪಂದ್ಯದಲ್ಲಿ ಒಂದೇ ದಿನ 400 ರನ್ ಗಳಿಸಿದರು, ಇದು ಜೂನಿಯರ್ ಗರಿಷ್ಠ ರನ್ ಗಳಿಸಿದ ವಿಶ್ವ ದಾಖಲೆ.
ಅವರ ನಂತರ ರೋನಿತ್ ಮೋರೆ ಕರ್ನಾಟಕ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡು ಮಿಂಚಿದ್ದರು. ಜತೆಗೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ಗಮನಸೆಳೆದಿದ್ದರು.
ಇದೀಗ ಬೆಳಗಾವಿಯ ಮೂರನೇ ಆಟಗಾರ ಸುಜಯ್ ಕರ್ನಾಟಕ ಪರವಾಗಿ ರಣಜಿ ತಂಡದಲ್ಲಿ ಆಡಲಿದ್ದಾರೆ.
ಸುಜಯ್ ಕರ್ನಾಟಕ ತಂಡದ ಎರಡನೇ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿದ್ದು, ಮುಂಬರುವ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಆಡಲಿದ್ದು ಶ್ರೇಷ್ಠ ಪ್ರದರ್ಶನ ನೀಡಿ ಬೆಳಗಾವಿಗೆ ಕೀರ್ತಿ ತರುವಂತಾಗಲಿ ಎನ್ನುವುದು ಬೆಳಗಾವಿ ಜನತೆಯ ಆಶಯವಾಗಿದೆ.