ಕೊಲಂಬೊ :
ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತವು ಏಷ್ಯಾಕಪ್ 2023ನೇ ಆವೃತ್ತಿಯ ಫೈನಲ್ಗೆ ಲಗ್ಗೆ ಹಾಕಿದೆ. ಟೂರ್ನಿಯಲ್ಲಿ ಈವರೆಗೆ ಭಾರತ ಅಜೇಯವಾಗಿ ಮುನ್ನುಗ್ಗಿದೆ.
ಏಷ್ಯಾಕಪ್ 2023 ಸೂಪರ್ ಫೋರ್ ಸುತ್ತಿನ ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ರೋಚಕ ಜಯ ಸಾಧಿಸಿದೆ. ಗೆಲುವಿಗೆ 214 ರನ್ಗಳ ಸಾಧಾರಣ ಗುರಿ ಪಡೆದ ಶ್ರೀಲಂಕಾ, 41 ರನ್ಗಳಿಂದ ಭಾರತಕ್ಕೆ ಶರಣಾಗಿದೆ. ಕಳೆದ ಬಾರಿಯ ಟಿ20 ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ಗೇರಲು ವಿಫಲವಾಗಿದ್ದ ಭಾರತ, 16 ಆವೃತ್ತಿಗಳ ಪೈಕಿ 11ನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಕೊಲಂಬೊದ ಆರ್. ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಭಾರತ 213 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ, ವೆಲ್ಲಲಾಗೆ ಹೋರಾಟದ ಹೊರತಾಗಿಯೂ 41.3 ಓವರ್ಗಳಲ್ಲಿ 172 ರನ್ ಗಳಿಸಿ ಆಲೌಟ್ ಆಯ್ತು. ಆ ಮೂಲಕ, ಏಕದಿನ ಕ್ರಿಕೆಟ್ನಲ್ಲಿ ಸತತ 13 ಪಂದ್ಯ ಗೆದ್ದು ಗೆಲುವಿನ ನಾಗಾಲೋಟದಲ್ಲಿದ್ದ ಶ್ರೀಲಂಕಾದ ಗೆಲುವಿಗೆ ರೋಹಿತ್ ಪಡೆ ಬ್ರೇಕ್ ಹಾಕಿತು. ಅಲ್ಲದೆ ಏಷ್ಯಾಕಪ್ 2023ರ ಆವೃತ್ತಿಯ ಫೈನಲ್ಗೆ ಲಗ್ಗೆ ಇಟ್ಟ ಮೊದಲ ತಂಡವಾಯ್ತು. ಇದು ಏಷ್ಯಾಕಪ್ನಲ್ಲಿ ಭಾರತದ 11ನೇ ಫೈನಲ್. ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆಯುವುದರೊಂದಿಗೆ ಕುಲ್ದೀಪ್ ಯಾದವ್ ಏಕದಿನ ಕ್ರಿಕೆಟ್ನಲ್ಲಿ 150 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.
ಲಂಕಾ ಕಳಪೆ ಆರಂಭ
ಚೇಸಿಂಗ್ ಆರಂಭಿಸಿದ ಲಂಕಾ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಿಗೆ ಭಾರತದ ವೇಗಿಗಳು ಕಾಡಿದರು. ತಂಡದ ಮೊತ್ತ 25 ಆಗುವಷ್ಟರಲ್ಲಿ ಮೊದಲ 3 ವಿಕೆಟ್ ಪತನವಾಯ್ತು. ಪಾತುಮ್ ನಿಸ್ಸಂಕಾ(6), ಕುಸಾಲ್ ಮೆಂಡಿಸ್ (15) ಮತ್ತು ಕುರುಣರತ್ನೆ (2) ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ಕೆಲಕಾಲ ಪ್ರತಿರೋಧ ಒಡ್ಡಿದ ಸದೀರ ಸಮರವಿಕ್ರಮ 17 ರನ್ ಗಳಿಸಿ ಕುಲ್ದೀಪ್ ಸ್ಪಿನ್ ಮೋಡಿಗೆ ಬಲಿಯಾದರು. ಅವರ ಬೆನ್ನಲ್ಲೇ 22 ರನ್ ಗಳಿಸಿದ ಚರಿತ್ ಅಸಲಂಕಾ ಕೂಡಾ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ನಾಯಕ ಶನಕ (9) ಬಂದ ವೇಗದಲ್ಲೇ ಹಿಂತಿರುಗಿದರು.
ಬ್ಯಾಟಿಂಗ್ನಲ್ಲೂ ಭಾರತಕ್ಕೆ ಕಾಡಿದ ವೆಲ್ಲಲಾಗೆ
ಒಂದು ಹಂತದಲ್ಲಿ 99 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಲಂಕಾಗೆ, ಧನಂಜಯ ಡಿ ಸಿಲ್ವಾ ಮತ್ತು ಆಲ್ರೌಂಡರ್ ವೆಲ್ಲಲಾಗೆ ಆಸರೆಯಾದರು. ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 41 ರನ್ ಗಳಿಸಿದ್ದ ಡಿ ಸಿಲ್ವಾ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಮಹೀಶ್ ತೀಕ್ಷಣ ಕೂಡಾ 2 ರನ್ ಗಳಿಸಿ ಔಟಾದರು. ಕಸುನ್ ರಜಿತ ಬಂದ ದಾರಿಯಲ್ಲೇ 1 ರನ್ ಗಳಿಸಿ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ಪಾಕ್ ವಿರುದ್ಧ 5 ವಿಕೆಟ್ ಪಡೆದು ಮಿಂಚಿದ್ದ ಕುಲ್ದೀಪ್ ಯಾದವ್, ಇಂದು 4 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾದರು.
ಭಾರತದ ಆರಂಭ ಅಬ್ಬರ, ಕಳಪೆ ಮುಕ್ತಾಯ
ಮೊದಲು ಬ್ಯಾಟಿಂಗ್ ಮಾಡಿದ ಭಾರತವು, ಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಸ್ಪಿನ್ ಮೋಡಿಗೆ ಸಿಲುಕಿ ಬ್ಯಾಟ್ ಬೀಸಲು ಪರದಾಡಿತು. ಅಂತಿಮವಾಗಿ 49.1 ಓವರ್ಗಳಿಗೆ 213 ರನ್ ಗಳಿಸಿ ಆಲೌಟ್ ಆಯ್ತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್, ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿದರು. ತಂಡದ ಮೊತ್ತ 80 ರನ್ ಇದ್ದಾಗ, ತಂಡ ಮೊದಲ ವಿಕೆಟ್ ಕಳೆದುಕೊಂಡಿತು. 11.1ನೇ ಓವರ್ನಲ್ಲಿ ವೆಲ್ಲಲಾಗೆ 19 ರನ್ ಗಳಿಸಿದ್ದ ಶುಭ್ಮನ್ ಗಿಲ್ ವಿಕೆಟ್ ಪಡೆದರು. ಅದರ ಬೆನ್ನಲ್ಲೇ ಕಳೆದ ಪಂದ್ಯದ ಶತಕವೀರ ವಿರಾಟ್ ಕೊಹ್ಲಿ(3) ವಿಕೆಟ್ಗಳನ್ನು ಬೇಗ ಪಡೆದ ವೆಲ್ಲಲಾಗೆ ಲಂಕಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಅರ್ಧಶತಕ ಸಿಡಿಸಿ ಆಡುತ್ತಿದ್ದ ನಾಯಕ ರೋಹಿತ್ ಶರ್ಮಾ ಕೂಡ 15.1ನೇ ಓವರ್ನಲ್ಲಿ 53 ರನ್ ಗಳಿಸಿ ವೆಲ್ಲಲಾಗೆ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಈ ವೇಳೆ ಒಂದಾದ ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ತಂಡವನ್ನು ಆರಂಭಿಕ ಹಿನ್ನಡೆಯಿಂದ ಪಾರು ಮಾಡಲು ಯತ್ನಿಸಿದರು. ಆದರೆ, 39 ರನ್ ಗಳಿಸಿದ್ದ ಕೆಎಲ್ ರಾಹುಲ್ ವಿಕೆಟ್ ಪಡೆಯುವುದರೊಂದಿಗೆ ವೆಲ್ಲಲಾಗೆ ಸತತ ನಾಲ್ಕು ವಿಕೆಟ್ ಕಬಳಿಸಿದರು. 33 ರನ್ ಗಳಿಸಿ ಇಶಾನ್ ಔಟಾದರೆ, ಹಾರ್ದಿಕ್ ಪಾಂಡ್ಯ (5) ವಿಕೆಟ್ ಪಡೆಯುವುದರೊಂದಿಗೆ ವೆಲ್ಲಲಾಗೆ ಐದು ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.
ರವೀಂದ್ರ ಜಡೇಜಾ (4), ಜಸ್ಪ್ರೀತ್ ಬುಮ್ರಾ (5), ಕುಲ್ದೀಪ್ ಯಾದವ್ (0) ಬಂದ ವೇಗದಲ್ಲೇ ವಿಕೆಟ್ ಒಪ್ಪಿಸಿದರು. ಡೆತ್ ಓವರ್ಗಳಲ್ಲಿ ಅಕ್ಷರ್ ಪಟೇಲ್ 26 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಮೊಹಮ್ಮದ್ ಸಿರಾಜ್ ಅಜೇಯ 5 ರನ್ ಗಳಿಸಿದರು.
ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ 10 ಓವರ್ಗಳಲ್ಲಿ 40 ರನ್ ನೀಡಿ ಭಾರತದ ಪ್ರಮುಖ ಐದು ವಿಕೆಟ್ ಪಡೆದರು. ಚರಿತ್ ಅಸಲಂಕಾ 9 ಓವರ್ಗಳಲ್ಲಿ 18 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ಭಾರತದ ಎಲ್ಲಾ ಹತ್ತು ವಿಕೆಟ್ಗಳನ್ನು ಸ್ಪಿನ್ನರ್ಗಳೇ ಕಬಳಿಸಿದರು.