ದೆಹಲಿ :
ಭಾರತ ತಂಡ ಜುಲೈ12 ರಿಂದ ಆಗಸ್ಟ್ 13ರ ವರೆಗೂ ವೆಸ್ಟ್ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಸೋಮವಾರ ಬಿಸಿಸಿಐ ಅಧಿಕೃತ ವೇಳಾಪಟ್ಟಿ ಪ್ರಕಟಿಸಿತು. ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಎರಡನೇ ಆವತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ಟೀಂ ಇಂಡಿಯಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸುಮಾರು ಒಂದು ತಿಂಗಳ ಬಿಡುವಿನ ಬಳಿಕ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವ ಮೂಲಕ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿದ್ದು, ಜುಲೈ 20ರಿಂದ 2ನೇ ಟೆಸ್ಟ್ ಪಂದ್ಯ ಟ್ರಿನಿಡಾಡ್ನಲ್ಲಿ ನಡೆಯಲಿದೆ. ಬಳಿಕ ಜುಲೈ 27, 29ರಂದು ಮೊದಲೆರಡು ಏಕದಿನಕ್ಕೆ ಬಾರ್ಬಡಾಸ್, ಆಗಸ್ಟ್ 1ರಂದು 3ನೇ ಏಕದಿನಕ್ಕೆ ಟ್ರಿನಿಡಾಡ್ ಆತಿಥ್ಯ ವಹಿಸಲಿದೆ.
ಆಗಸ್ಟ್ 3ರಿಂದ ಟ್ರಿನಿಡಾಡ್ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, 2 ಮತ್ತು 3ನೇ ಪಂದ್ಯ ಕ್ರಮವಾಗಿ ಆಗಸ್ಟ್ 6, 8ಕ್ಕೆ ಗಯಾನದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾದಲ್ಲಿ ನಡೆಯಲಿದೆ.