ಹೊಸದಿಲ್ಲಿ: ಆಹಾರ ವಿತರಣ ಸಂಸ್ಥೆ “ಜೊಮ್ಯಾಟೋ’ ಹೆಸರು ಇನ್ನು ಮುಂದೆ ಬದಲಾಗಲಿದೆ. ಅದನ್ನು “ಎಟರ್ನಲ್ ಲಿಮಿಟೆಡ್’ ಎಂದು ಮರುನಾಮಕರಣ ಮಾಡಲು ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಸಂಸ್ಥೆಯ ಪಾಲುದಾರರಿಗೆ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅದಾಗ್ಯೂ ಆಹಾರ ವಿತರಣೆಯ ವಿಭಾಗದ ಹೆಸರು ಜೊಮ್ಯಾಟೋ ಎಂದೇ ಇರಲಿದೆ. ಆಹಾರ ವಿತರಣೆ ಜತೆ ಇನ್ನಷ್ಟು ಕ್ಷೇತ್ರಗಳಿಗೆ ಕಾಲಿಟ್ಟಿರುವ ಸಂಸ್ಥೆ, ಈ ನಿರ್ಧಾರ ಮಾಡಿದೆ. “ಬ್ಲಿಂಕಿಟ್’ ಖರೀದಿ ವೇಳೆಯೇ ಈ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಗೋಯಲ್ ಹೇಳಿದ್ದಾರೆ.
ಈ ಬದಲಾವಣೆಗೆ ಕಂಪನಿಯ ಷೇರುದಾರರ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸೇರಿ ಇನ್ನಿತರ ಅಗತ್ಯ ಶಾಸನಬದ್ಧ ಸಂಸ್ಥೆಗಳ ಒಪ್ಪಿಗೆ ಬೇಕು ಎಂದು ಷೇರು ಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಕಂಪನಿ ಹೇಳಿದೆ.
ಅದಾಗ್ಯೂ ಕಂಪನಿಯ ಫುಡ್ ಡೆಲಿವರಿ ಉದ್ಯಮ ಜೊಮ್ಯಾಟೊದ ಹೆಸರು, ಆ್ಯಪ್ ಹಾಗೆ ಇರಲಿದೆ.
‘ಈ ಬದಲಾವಣೆಗೆ ನಮ್ಮ ಬೋರ್ಡ್ ಇಂದು ಒಪ್ಪಿಗೆ ನೀಡಿದೆ. ಇದನ್ನು ಬೆಂಬಲಿಸಬೇಕು ಎಂದು ನಾನು ಷೇರುದಾರರಿಗೆ ಮನವಿ ಮಾಡುತ್ತೇನೆ. ಬದಲಾವಣೆಗೆ ಒಪ್ಪಿಗೆ ಸಿಕ್ಕರೆ ನಮ್ಮ ವೆಬ್ಸೈಟ್ zomato.com ನಿಂದ eternal.comಗೆ ಬದಲಾಗಲಿದೆ. ನಮ್ಮ ಸ್ಟಾಕ್ ಟಿಕರ್ ಅನ್ನು ಕೂಡ ಬದಲಾಯಿಸಲಿದ್ದೇವೆ’ ಎಂದು ಜೊಮ್ಯಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಷೇರುದಾರರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಹೆಸರು ಬದಲಾವಣೆ ಬಗ್ಗೆ ಜೊಮ್ಯಾಟೊ ಮಾಹಿತಿ ಎಟರ್ನಲ್ ಅಡಿಯಲ್ಲಿ ಜೊಮ್ಯಾಟೊ, ಬ್ಲಿಂಕಿಂಟ್, ಡಿಸ್ಟ್ರಿಕ್ಟ್ ಹಾಗೂ ಹೈಪರ್ಪ್ಯೂರ್ ಎನ್ನುವ ನಾಲ್ಕು ಉದ್ಯಮಗಳು ಇರಲಿವೆ ಎಂದು ಅವರು ತಿಳಿಸಿದ್ದಾರೆ.
‘ನಾವು ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಂಡಾಗಲೇ, ಬ್ರಾಂಡ್ ಹಾಗೂ ಕಂಪನಿಯ ಹೆಸರಿನ ನಡುವೆ ವ್ಯತ್ಯಾಸ ಗುರುತಿಸಲು ಎಟರ್ನಲ್ ಎನ್ನುವ ಹೆಸರು ಬಳಸಲು ಆರಂಭಿಸಿದೆವು. ಹೀಗಾಗಿ ಕಂಪನಿಯ ಹೆಸರನ್ನು ಎಟರ್ನಲ್ ಎಂದು ಬದಲಾಯಿಸಲು ತೀರ್ಮಾನಿಸಿದೆವು.
ಈಗ ನಾವು ಕಂಪನಿಯ ಹೆಸರನ್ನು Zomato Ltd ನಿಂದ (ಆ್ಯಪ್/ ಬ್ರಾಂಡ್ ಹೆಸರು ಬದಲಾವಣೆ ಇಲ್ಲ) Eternal Ltd ಗೆ ಬದಲಾಯಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.