ಢಾಕಾ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ (84) ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಗುರುವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ಯಾರಿಸ್ನಲ್ಲಿದ್ದ ಯೂನಸ್ ಅವರು ಢಾಕಾಗೆ ಗುರುವಾರ ಮರಳಿದರು. ಅವರಿಗೆ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು.
ಬಾಂಗ್ಲಾದೇಶದ ಅಧ್ಯಕ್ಷರ ‘ಬಂಗಭವನ’ದಲ್ಲಿ ನಡೆದ ಸಮಾರಂಭದಲ್ಲಿ, ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಯೂನಸ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
‘ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತೇನೆ ಮತ್ತು ರಕ್ಷಿಸುತ್ತೇನೆ’ ಎಂದು ಯೂನಸ್ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೇಳಿದರು.
ಇದೇ ವೇಳೆ, ಯೂನಸ್ ನೇತೃತ್ವದ ಸಂಪುಟದ ಸಲಹೆಗಾರರಾಗಿ 12ಕ್ಕೂ ಹೆಚ್ಚು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ವಿದ್ಯಾರ್ಥಿಗಳ ಹೋರಾಟದ ನಾಯಕರಾದ ನಹೀದ್ ಇಸ್ಲಾಂ ಮತ್ತು ಆಸಿಫ್ ಮೊಹಮ್ಮದ್ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ತೌಹೀದ್ ಹುಸೇನ್, ಮಾಜಿ ಅಟಾರ್ನಿ ಜನರಲ್ ಹಸನ್ ಆರಿಫ್ ಪ್ರಮುಖರು.
ರಾಜಕೀಯ ಮುಖಂಡರು, ಸೇನೆಯ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೀಸಲಾತಿ ನೀತಿ ವಿರೋಧಿಸಿ ದೇಶದಾದ್ಯಂತ ನಡೆದ ಹಿಂಸಾಚಾರದ ಬೆನ್ನಲ್ಲೇ, ಪ್ರಧಾನಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದ ಶೇಖ್ ಹಸೀನಾ ಅವರು ದೇಶ ತೊರೆದಿದ್ದರು. ಬಳಿಕ ಆರ್ಥಿಕ ತಜ್ಞ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಲಾಗಿತ್ತು.