ಬೆಂಗಳೂರು:
ಸರ್ಕಾರದ ಐದನೇ ಮತ್ತು ಕೊನೆಯ ಗ್ಯಾರಂಟಿಗೆ ಈಗ ಮುಹೂರ್ತ ಫಿಕ್ಸ್ ಆಗಿದೆ.
ಡಿ. 26 ರಿಂದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಸ್ವಾಮಿ ವಿವೇಕಾನಂದ ಜನ್ಮದಿನವಾದ ಜನವರಿ 12 ರಂದು ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮೆ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 26 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಲೋಗೋ ಅನಾವರಣ ಮಾಡಲಿದ್ದಾರೆ.
ಜನವರಿ 12ರಂದು ಶಿವಮೊಗ್ಗದಲ್ಲಿ ‘ಯುವನಿಧಿ’ಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಸುಮಾರು 5.30ಲಕ್ಷ ಫಲಾನುಭವಿಗಳು ಇರುವುದಾಗಿ ಅಂದಾಜಿಸಲಾಗಿದೆ. ಇದರಲ್ಲಿ 4.81 ಲಕ್ಷ ಪದವೀಧರರು ಮತ್ತು 48,153 ಡಿಪ್ಲೊಮಾ ತೇರ್ಗಡೆಯಾದವರು ಇದ್ದಾರೆ. 2023- 24ನೇ ಸಾಲಿನಲ್ಲಿ ಉತ್ತೀರ್ಣರಾದವರು ಈ ಯುವನಿಧಿ ʼನಿರುದ್ಯೋಗ ಭತ್ಯೆʼಗೆ ಅರ್ಹರಾಗಲಿದ್ದಾರೆ. ಪದವಿ ಪಾಸ್ ಆದವರೆಗೆ 3 ಸಾವಿರ ರೂ., ಡಿಪ್ಲೋಮಾ ಪಾಸ್ ಆದವರಿಗೆ 1500 ಸಾವಿರ ರೂ. ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
2022- 23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ/ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದ ರಹವಾಸಿಯಾಗಿರಬೇಕು ಎಂಬ ಮಾನದಂಡವಿದೆ.
ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
ಈ ಭತ್ಯೆಯು ಅವರಿಗೆ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿವರೆಗೆ ಸಿಗಲಿದೆ.
ಉನ್ನತ ವ್ಯಾಸಂಗಕ್ಕೆ ಅಡ್ಮಿಶನ್ ಆದವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು, ಯಾವುದೇ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು ಈ ಯೋಜನೆಗೆ ಅನರ್ಹರು.
ಯಾವುದೇ ಸರ್ಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇದು ಅನ್ವಯವಾಗುವುದಿಲ್ಲ.
ಫಲಾನುಭವಿಗಳು ಯಾವುದಾದರೂ ಉದ್ಯೋಗ ಸಿಕ್ಕಿದ ತಕ್ಷಣ ಈ ಭತ್ಯೆ ಸ್ಥಗಿತಗೊಳ್ಳಲಿದೆ.
ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
ಯುವ ನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ ?
‘ಸೇವಾ ಸಿಂಧು’ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು
ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಬೇಕಾಗುತ್ತದೆ.
ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿರಬೇಕು, ಖಾತೆಯೇ ಇಲ್ಲದಿದ್ದರೆ ಮಾಡಿಸಬೇಕು.
ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023 ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023 ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು).
ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ಗಳಲ್ಲಿ ಅರ್ಜಿ ಸಲ್ಲಿಸಬಹುದು.