ಬೆಳಗಾವಿ : 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೂ, ರಾಜ್ಯದಿಂದ ಲೋಕಸಭೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ಸಾಧ್ಯವಾಗದಿರುವುದಕ್ಕೆ ಆಡಳಿತಾರೂಢ ಬಿಜೆಪಿಯ ಚುನಾವಣಾ ಅಕ್ರಮಗಳೇ ಪ್ರಮುಖ ಕಾರಣ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ಚುನಾವಣಾ ಅಕ್ರಮಗಳ ಬಗ್ಗೆ ಪ್ರಮುಖ ಆರೋಪ
ಮಂಜುನಾಥ್ ಗೌಡ ಅವರು ತಮ್ಮ ಭಾಷಣದಲ್ಲಿ “ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮವನ್ನು ಕೊಂಡಾಡಿದರು. ”ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತು. ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ಮನೆ ಮನೆಗೆ ತಲುಪಿಸಿ ಜನರ ವಿಶ್ವಾಸ ಗಳಿಸಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ನಮಗೆ ಸಿಗಬೇಕಾದ ಸ್ಥಾನಗಳು ಸಿಗಲಿಲ್ಲ. ಇದಕ್ಕೆ ಬಿಜೆಪಿಯ ಚುನಾವಣಾ ಅಕ್ರಮಗಳೇ ಮೂಲ ಕಾರಣ” ಎಂದು ಸ್ಪಷ್ಟವಾಗಿ ಆರೋಪಿಸಿದರು. ಈ ಚುನಾವಣಾ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕರು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಲು ಸಿದ್ಧರಾಗಿದ್ದಾರೆ ಎಂದೂ ಅವರು ತಿಳಿಸಿದರು. “ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ಬಿಜೆಪಿಯ ಚುನಾವಣಾ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಡಲಿದ್ದಾರೆ. ಈ ವಿಷಯವನ್ನು ನಾವೆಲ್ಲರೂ ಜನರಿಗೆ ತಲುಪಿಸಬೇಕಾಗಿದೆ” ಎಂದು ಅವರು ಕರೆ ನೀಡಿದರು.
ಗ್ಯಾರಂಟಿ ಯೋಜನೆಗಳ ಯಶಸ್ಸು
ಭಾಷಣದ ಆರಂಭದಲ್ಲಿ, “ನಮ್ಮೆಲ್ಲರ ಆರಾಧ್ಯ ದೈವ ಸವದತ್ತಿ ಯಲ್ಲಮ್ಮ ತಾಯಿ, ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ತ್ಯಾಗ, ಬಲಿದಾನಗಳಿಗೆ ತಲೆಬಾಗುತ್ತೇನೆ” ಎಂದು ತಿಳಿಸಿದ ಮಂಜುನಾಥ್ ಗೌಡ, ಕುಂದಾನಗರಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ನಿಂತು ಮಾತನಾಡಲು ಹೆಮ್ಮೆ ಆಗುತ್ತಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಗೃಹಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.
2023ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಪಕ್ಷದ ಕಾರ್ಯಕರ್ತರ ಶ್ರಮವೇ ಕಾರಣ. ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ಮನೆ-ಮನೆಗೂ ತಲುಪಿಸಿರುವ ಶ್ರಮಕ್ಕೆ ಈಗ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಈಡೇರಿಸುವ ಮೂಲಕ ನಿಮ್ಮ ಗೌರವವನ್ನು ಉಳಿಸಿದೆ. ಇದು ಪಕ್ಷ ಸಂಘಟನೆಗೂ ಬಲ ತುಂಬಿದೆ ಎಂದು ಮಂಜುನಾಥ್ ಗೌಡ ಹೇಳಿದರು.
ಮುಡಾ ವಿವಾದ ಮತ್ತು ಬಿಜೆಪಿ ಕ್ಷಮೆಗೆ ಆಗ್ರಹ:
ಮುಡಾ (MUDA) ವಿಚಾರದಲ್ಲಿ ಬಿಜೆಪಿ ಸುಳ್ಳು ಆರೋಪ ಮಾಡಿದ್ದು ಈಗ ಜಗಜ್ಜಾಹೀರಾಗಿದೆ. ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಈ ವಿಚಾರದಲ್ಲಿ ಬಿಜೆಪಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಮಂಜುನಾಥ್ ಗೌಡ ಆಗ್ರಹಿಸಿದರು.
ಶೆಟ್ಟರ್ ಟೀಕೆಗೆ ಜನರ ಉತ್ತರ:
ಸಂಸದ ಜಗದೀಶ್ ಶೆಟ್ಟರ್ ಅವರು ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಟೀಕಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಪಕ್ಷದಲ್ಲಿ ವಿಧಾನಸಭೆ ಟಿಕೆಟ್ ಪಡೆಯಲು ಸಾಧ್ಯವಾಗದ ಶೆಟ್ಟರ್ ಅವರಿಗೆ ಕಾಂಗ್ರೆಸ್ ಪಕ್ಷವೇ ರಾಜಕೀಯ ಪುನರ್ಜನ್ಮ ನೀಡಿದೆ. ಈಗ ಅವರೇ ಟೀಕಿಸಿದ ಗ್ಯಾರಂಟಿಗಳಿಂದ ಜನ ಬದುಕು ಕಟ್ಟಿಕೊಂಡಿದ್ದಾರೆ. ಜನರೇ ಶೆಟ್ಟರ್ ಅವರಿಗೆ ಉತ್ತರ ನೀಡಿದ್ದಾರೆ ಎಂದು ಗೌಡ ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿದ್ದು, ರಾಜ್ಯದ ತಲಾದಾಯ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಬಂದಿದೆ. ಗ್ಯಾರಂಟಿಗಳಿಂದ ರಾಜ್ಯದ ತಲಾದಾಯ 2 ಲಕ್ಷಕ್ಕೆ ಮುಟ್ಟಿದೆ ಎಂದು ಅವರು ತಿಳಿಸಿದರು. ಶಕ್ತಿ ಯೋಜನೆ ಅಡಿ ಮಹಿಳೆಯರು 500 ಕೋಟಿ ಟಿಕೆಟ್ ಪಡೆದು ಉಚಿತ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆ ಅಡಿ 55,000 ಕೋಟಿ ಹಣವನ್ನು ನೇರವಾಗಿ ನೀಡಲಾಗಿದೆ. ಇದುವರೆಗೆ ಗ್ಯಾರಂಟಿಗಳಿಗಾಗಿಯೇ 80,000 ಕೋಟಿಯಷ್ಟು ಖರ್ಚಾಗಿದೆ. ಗೃಹಲಕ್ಷ್ಮಿಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದರೆ, ಅನ್ನಭಾಗ್ಯ ಬಡವರ ಹಸಿವು ನೀಗಿಸಿದೆ. ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಮಂಜುನಾಥ್ ಗೌಡ ಸಮರ್ಥಿಸಿಕೊಂಡರು. ವಿಶ್ವಸಂಸ್ಥೆ ಅಧ್ಯಕ್ಷರು ಮತ್ತು ಆರ್ಥಿಕ ತಜ್ಞರು ಕೂಡ ಗ್ಯಾರಂಟಿಗಳನ್ನು ಹಾಡಿ ಹೊಗಳಿದ್ದಾರೆ ಎಂದು ಅವರು ಹೇಳಿದರು.
ಗ್ಯಾರಂಟಿಗಳ ಗೌರವ ಹೆಚ್ಚಿಸಿದ ಜಿಲ್ಲೆಯ ಮಹಿಳೆಯರು:
ಗ್ಯಾರಂಟಿಗಳ ಬಗ್ಗೆ ಬಡವರ ವಿರೋಧಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಟೀಕಿಸುತ್ತಿದ್ದರೆ, ಬೆಳಗಾವಿ ಜಿಲ್ಲೆಯ ಮಹಿಳೆಯರು ಗ್ಯಾರಂಟಿಗಳ ಗೌರವ ಹೆಚ್ಚಿಸಿದ್ದಾರೆ ಎಂದು ಮಂಜುನಾಥ್ ಗೌಡ ಉದಾಹರಣೆ ಸಹಿತ ವಿವರಿಸಿದರು. ಸಂಗೊಳ್ಳಿ ಗ್ರಾಮದ ನಿಂಗವ್ವ ಶಕ್ತಿ ಯೋಜನೆ ಅಡಿ ಮೊದಲಿಗೆ ಉಚಿತ ಪ್ರಯಾಣ ಮಾಡುವಾಗ ಬಸ್ಸಿನ ಮೆಟ್ಟಿಲಿಗೆ ಹಣೆ ಮುಟ್ಟಿಸಿ ನಮಸ್ಕಾರ ಮಾಡಿದ್ದರು. ಸವದತ್ತಿಯ ಮರಕುಂಬಿ ಗ್ರಾಮದ ವಿಶ್ವನಾಥ ಮೃತಪಡುವ ಮೊದಲು, ‘ಅಮ್ಮ ನೀನು ಬದುಕಲು ಗೃಹಲಕ್ಷ್ಮೀಯ 2 ಸಾವಿರ ರೂಪಾಯಿ ಬರುತ್ತದೆ’ ಎಂದು ಹೇಳಿದ್ದಾಗಿ ತಾಯಿ ಪುತ್ರನ ಮೃತದೇಹದ ಮುಂದೆ ಹೇಳಿದ್ದು, ಆ ಸುದ್ದಿ ಓದಿಯೇ ತಮ್ಮ ಕಣ್ಣಾಲಿಗಳು ತೇವಗೊಂಡಿದ್ದವು ಎಂದು ಗೌಡ ಭಾವುಕರಾದರು. ರಾಯಬಾಗದ ಬಳಿ ಅಕ್ಕತಾಯಿ ಅಜ್ಜಿ ಗೃಹಲಕ್ಷ್ಮೀ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಗ್ರಂಥಾಲಯ ಮಾಡಿಸಿದ್ದರು. ಎತ್ತು ಖರೀದಿ, ಮಗನಿಗೆ ದ್ವಿಚಕ್ರ ವಾಹನ ಖರೀದಿ ಹೀಗೆ ಈ ಜಿಲ್ಲೆಯಲ್ಲೇ ಗೃಹಲಕ್ಷ್ಮೀ ಹಣ ಬಡವರ ಬದುಕಿಗೆ ನೆಮ್ಮದಿ ತಂದಿದೆ. ಹಣದ ಸದ್ಬಳಕೆ ಗ್ಯಾರಂಟಿಗಳ ಗೌರವ ಹೆಚ್ಚಿಸಿದೆ ಎಂದರು.
ಕೇಂದ್ರದ ಅನ್ಯಾಯದ ವಿರುದ್ಧ ಹೋರಾಟಕ್ಕೆ ಕರೆ:
ಗ್ಯಾರಂಟಿಗಳ ಮಹತ್ವ ವಿರೋಧಪಕ್ಷಗಳಿಗೆ ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ ಗೌಡ, ಬಿಜೆಪಿ ಕಾರ್ಯಕರ್ತರ ಲಕ್ಷಾಂತರ ಕುಟುಂಬಗಳನ್ನೂ ನಮ್ಮ ಗ್ಯಾರಂಟಿಗಳು ಸಲಹುತ್ತಿವೆ. ಇದಕ್ಕೆ ನಾವೆಲ್ಲರೂ ಹೆಮ್ಮೆ ಪಡೋಣ ಎಂದರು. ನಮ್ಮನ್ನು ಟೀಕಿಸುವ ಇದೇ ಬಿಜೆಪಿಯೇ ಬಿಹಾರದಲ್ಲಿ 125 ಯುನಿಟ್ ವರೆಗೆ ಉಚಿತ ವಿದ್ಯುತ್ ಘೋಷಿಸಿದೆ. ಎಲ್ಲಾ ಬಿಜೆಪಿ ರಾಜ್ಯಗಳಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನೇ ಅನುಷ್ಠಾನ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಬಿಜೆಪಿಯ ಬೆಲೆ ಏರಿಕೆ, ರಾಜ್ಯಕ್ಕೆ ಮಾಡುತ್ತಿರುವ ಅನುದಾನ ತಾರತಮ್ಯ, ಮತ್ತು ಕಳೆದ ಎರಡು ವರ್ಷಗಳಲ್ಲಿ ಒಂದು ಮೂಲಭೂತ ಸೌಕರ್ಯದ ಯೋಜನೆ ನೀಡದ ಕೇಂದ್ರದ ವಿರುದ್ಧ ಹೋರಾಡಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷರು ಕರೆ ನೀಡಿದರು. ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿ ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ಇದೇ ಬಹುಮತ ಕಾಯ್ದುಕೊಳ್ಳೋಣ ಎಂದು ಆಶಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಲಭಿಸದಿರಲು ಬಿಜೆಪಿಯ ಅಕ್ರಮಗಳೇ ಕಾರಣ: ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡರ ಗಂಭೀರ ಆರೋಪ
