ವಿಶ್ವಸಂಸ್ಥೆ:
9ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 21ರಂದು ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೋಗ ಅಧಿವೇಶನದ ನೇತೃತ್ವವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನವನ್ನು ವಾರ್ಷಿಕ ಸಂಸ್ಮರಣೆಯಾಗಿ ಆಚರಿಸಲು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮೋದಿ ಪ್ರಸ್ತಾಪಿಸಿದ ಒಂಭತ್ತು ವರ್ಷಗಳ ಬಳಿಕ, ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಐತಿಹಾಸಿಕ ಸಂಸ್ಮರಣೆಯ ಯೋಗ ಅಧಿವೇಶನ ನಿಗದಿಯಾಗಿದೆ. ಇದರ ನೇತೃತ್ವವನ್ನು ಸ್ವತಃ ಮೋದಿ ಅವರೇ ವಹಿಸುತ್ತಿದ್ದಾರೆ.
ಜೂನ್ 21ರಂದು ಬೆಳಿಗ್ಗೆ 8ರಿಂದ 9ರವರೆಗೆ ಯೋಗ ಅಧಿವೇಶನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯ ಉತ್ತರದ ಹುಲ್ಲುಹಾಸಿನಲ್ಲಿ ನಡೆಯಲಿದೆ. ಕಳೆದ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿರುವ ಭಾರತವು ವಿಶ್ವಸಂಸ್ಥೆಗೆ ಕೊಡುಗೆಯಾಗಿ ನೀಡಿರುವ ಮಹಾತ್ಮಾ ಗಾಂಧಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತದೆ.
ಯೋಗ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು, ವಿವಿಧ ದೇಶಗಳ ರಾಯಭಾರಿಗಳು, ರಾಜತಾಂತ್ರಿಕರು, ಪ್ರತಿನಿಧಿಗಳು ಹಾಗೂ ಅನಿವಾಸಿಗರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ವಿಶ್ವಸಂಸ್ಥೆಯಲ್ಲಿ ಮುಂದಿನ ವಾರ ನಡೆಯಲಿರುವ 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಲು ಎದುರು ನೋಡುತ್ತಿದ್ದೇನೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದ ಅಧ್ಯಕ್ಷ ಸಬಾ ಕೊರೊಸಿ ಟ್ವೀಟ್ ಮಾಡಿದ್ದಾರೆ.
ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವುದು ಅಂತರರಾಷ್ಟ್ರೀಯ ಯೋಗ ದಿನದ ಉದ್ದೇಶವಾಗಿದೆ. 2014ರ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದೆ.