ಬೆಂಗಳೂರು :
ಮುಂದಿನ ದಿನಗಳಲ್ಲಿ ಪಕ್ಷ ತ್ಯಜಿಸಿದವರ ಬಣ್ಣ ಬಯಲು ಮಾಡುವೆ. ಬಿಜೆಪಿ ತ್ಯಜಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದೆ. ಹಳೇ ಬೇರು ಹೊಸ ಚಿಗುರು ಸೇರಿ ಪಕ್ಷ ಬಲಪಡಿಸಬೇಕಾಗಿದೆ. ನನಗೆ, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವರಿಗೆ ಪಕ್ಷ ಹಲವಾರು ಸಲ ಅವಕಾಶ ಕೊಟ್ಟಿದೆ. ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತಂದು ಶಾಸಕ ಹಾಗೂ ಸಚಿವರನ್ನಾಗಿ ಮಾಡಿದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸವದಿ ಸೋತರು. ಆದರೂ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಶೆಟ್ಟರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ ಎಂದು ನಾನು ಹಾಗೂ ಧರ್ಮೇಂದ್ರ ಪ್ರಧಾನ ಮನವರಿಕೆ ಮಾಡಿದೆವು. ಆದರೂ ಅವರು ಒಪ್ಪಲಿಲ್ಲ. ಜಗದೀಶ್ ಶೆಟ್ಟರ್ ಅವರಿಗೆ ನಾವು ಯಾವುದೇ ಅನ್ಯಾಯ ಮಾಡಿಲ್ಲ. ಅವರು ಈಗಾಗಲೇ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿದ್ದಾರೆ ಎಂದು ಯಡಿಯೂರಪ್ಪ ಗುಡುಗಿದರು.
ಜಗದೀಶ್ ಶೆಟ್ಟರ್ ಅವರು ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿದ್ದರು . ಜಗದೀಶ್ ಶೆಟ್ಟರ್ರನ್ನು ಶಾಸಕ , ಮಂತ್ರಿ , ಸಿಎಂ ಮಾಡಿದ್ದೆವು. ಶೆಟ್ಟರ್ ಅವರಿಗೆ ನಾನು , ಅನಂತಕುಮಾರ್ ಕಾವಲಾಗಿದ್ದೆವು . ನನ್ನ ಜತೆ ಹೆಜ್ಜೆ ಹಾಕುವ ಜವಾಬ್ದಾರಿ ಜಗದೀಶ್ ಶೆಟ್ಟರ್ ಗೆ ಇತ್ತು . ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ . ಇಂತಹ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ , ನಿರ್ಧಾರ ಅವರ ನಂಬಿದ ವಿಚಾರಕ್ಕೆ ತದ್ವಿರುದ್ಧವಾಗಿದೆ. ಸ್ಥಾನಮಾನ ಸಿಗಲಿ ಸಿಗದಿರಲಿ , ದೇಶಕ್ಕಾಗಿ ಕೆಲಸ ಮಾಡಬೇಕಾಗಿರುವುದು ನಾವು ನಡೆದುಕೊಂಡು ಬಂದ ದಾರಿ . ಪಕ್ಷದ ಸಹಕಾರ ಇಲ್ಲದಿದ್ದರೇ ವ್ಯಕ್ತಿ ಎತ್ತರಕ್ಕೆ ಬೆಳೆಯಲ್ಲ . ಪಕ್ಷದ ಸಹಕಾರ ಇಲ್ಲದಿದ್ರೆ ಸಿಎಂ ಆಗಲಾರರು ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದರು .
ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ . ವೀರಶೈವ ಲಿಂಗಾಯತ ಸಮುದಾಯಕ್ಕೆ ಪಕ್ಷ ಸ್ಥಾನ ನೀಡಿದೆ.ರಾಜ್ಯಾದ್ಯಂತ ಸುತ್ತಾಡಿ ಇವರ ಬಂಡವಾಳ ಬಯಲು ಮಾಡುತ್ತೇನೆ . ಮತ್ತೆ ನಿಮಗೆ ಅಧಿಕಾರ ಕೊಡಲ್ಲ ಎಂದು ಶೆಟ್ಟರ್ ಗೆ ಹೇಳಿದ್ದೀವಾ ? ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ . ಕೇಂದ್ರಕ್ಕೆ ಬನ್ನಿ ಮಂತ್ರಿ ಎಂದು ಪ್ರಧಾನ್ ಹೇಳಿದ್ದಾರೆ . ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ . ಜಗದೀಶ್ ಶೆಟ್ಟರ್ಗೆ ಒಳ್ಳೆಯದಾಗಲಿ , ಇನ್ನು ಹೆಚ್ಚಾಗಿ ಮಾತಾಡಲ್ಲ . ಒಂದು ವೇಳೆ ಅವರಿಗೆ ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಸ್ವಾಗತ . ನಾನೇ ಮುಂದೆ ನಿಂತು ಶೆಟ್ಟರ್ , ಸವದಿಯನ್ನು ಸ್ವಾಗತಿಸುವೆ . ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನನ್ನ ಸಂಪೂರ್ಣ ಬದುಕನ್ನು ಬಿಜೆಪಿ , ದೇಶಕ್ಕೆ ಮುಡಿಪಿಟ್ಟಿದ್ದೇನೆ . ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಆಗಲ್ಲ . ಈ ಚುನಾವಣೆಯಲ್ಲಿ ಹೊಸಮುಖಗಳಿಗೆ ಅವಕಾಶ ಕೊಟ್ಟಿದ್ದೇವೆ . ಎಲ್ಲಾ ಸಮುದಾಯಗಳನ್ನು ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ . ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ . ಮೀಸಲಾತಿ ಅನೇಕ ಬೇಡಿಕೆಗಳು ಹೆಚ್ಚಿಸಿವೆ . ಬಿಜೆಪಿ ಸಾಮಾಜಿಕ ನ್ಯಾಯ ಪಾಲನೆ ಮಾಡಿದೆ . ಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದರು .