ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತಮಗೆ ಟಿಕೆಟ್ ನೀಡದೇ ಇರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಜಗದೀಶ್ ಶೆಟ್ಟರ್ ಬಿಜೆಪಿ ತ್ಯಜಿಸಿದ್ದರು. ಆದರೆ, ತಿಂಗಳ ಹಿಂದೆ ನಡೆದ ಮಹತ್ತರ ಬೆಳವಣಿಗೆಯಲ್ಲಿ ಮತ್ತೆ ಅವರನ್ನು ಬಿಜೆಪಿಗೆ ಕರೆತರಲಾಗಿತ್ತು. ಆ ಸಂದರ್ಭದಲ್ಲೇ ಅವರಿಗೆ ಬೆಳಗಾವಿಯಿಂದ ಲೋಕಸಭೆಗೆ ಸ್ಪರ್ಧಿಸಲು ಸೂಚನೆ ನೀಡಲಾಗಿತ್ತು. ಆದರೆ ಬೆಳಗಾವಿಯ ಬಿಜೆಪಿ ಆಕಾಂಕ್ಷಿತರಷ್ಟೇ ಶೆಟ್ಟರ್ ಸ್ಪರ್ಧೆಗೆ ಆಕ್ಷೇಪಿಸಿದ್ದರೆ ಹೊರತು ಇಡೀ ಬೆಳಗಾವಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿರಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ.
ಬೆಳಗಾವಿ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಟಿಕೆಟ್ ನೀಡಿರುವ ವಿಚಾರದಲ್ಲಿ ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರು ನಡೆಸಿದ್ದ ಗೋ ಬ್ಯಾಕ್ ಚಳವಳಿ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸಿದ್ದ ಆಕಾಂಕ್ಷಿಗಳ ಭೇಟಿಯಾಗಲು ನಿರ್ಧರಿಸಿರುವ ಯಡಿಯೂರಪ್ಪ ಅವರು ಅವರೆಲ್ಲರ ಜೊತೆ ಮಾತುಕತೆ ನಡೆಸಿ ಸಮಾಧಾನಪಡಿಸಲಿದ್ದಾರೆ. ಬೆಳಗಾವಿಯ ಯುಕೆ 27 ಹೋಟೆಲ್ ನಲ್ಲಿ ಸಭೆ ನಿಗದಿಯಾಗಿದೆ. ಬೆಳಗಾವಿಯ ಬಿಜೆಪಿ ನಾಯಕರು ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಇಂದು ರಾತ್ರಿ ಬೆಳಗಾವಿಗೆ ಆಗಮಿಸುವ ಕಾರ್ಯಕ್ರಮ ನಿಗದಿಯಾಗಿದ್ದು ಯಾವುದೇ ಭಿನ್ನಮತ ಸೃಷ್ಟಿ ಆಗದಂತೆ ನೋಡಿಕೊಳ್ಳಲು ನಾಯಕರಿಗೆ ಸೂಚಿಸಲಿದ್ದಾರೆ.