ಬೆಳಗಾವಿ :
ಬೆಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್ ಹಾಗೂ ನನ್ನ ವಿರುದ್ಧ ಮಾತನಾಡಿದ್ದಾರೆ. ಅವರಿಗೆ ನನ್ನ ವಿರುದ್ದ ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ ಎಂದು ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ನಾಯಕ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.
ಹಿಂದೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆದರೆ ಅವರು ಪಕ್ಷ ಬಿಟ್ಟು ಪಕ್ಷವನ್ನು ಮುಳುಗಿಸಿದ ಕೀರ್ತಿ ಹೊತ್ತಿದ್ದಾರೆ. ಅವರು ತಮ್ಮ ಹಿಂದಿನ ಘಟನೆಗಳನ್ನು ಸ್ವಲ್ಪ ಮೆಲುಕು ಹಾಕಬೇಕು. ಅವರು ನಮಗೆ ಅತ್ಯಂತ ಗೌರವಾನ್ವಿತರು. ಅವರಿಗೆ ನಮ್ಮ ಬಗ್ಗೆ ಮಾತನಾಡಲು ಹಕ್ಕಿಲ್ಲ. ಸಂಪೂರ್ಣ ಬಹುಮತ ನಮಗೆ ಬರಲಿದ್ದು, 125 ಕ್ಕಿಂತ ಹೆಚ್ಚು ಶಾಸಕರು ಆಯ್ಕೆಯಾಗುತ್ತಾರೆ. ಸ್ವಂತ ಬಲದ ಮೇಲೆ ಕಾಂಗ್ರೆಸ್ ಆಡಳಿತ ನಡೆಸಲಿದೆ. ಬಿಜೆಪಿ ಬಗ್ಗೆ ನಾನು ಯಾವುದೇ ಚರ್ಚೆ ಹಾಗೂ ಟೀಕೆ ಮಾಡಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ನನಗೆ ಈಗಾಗಲೇ 15 ರಿಂದ 20 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವಂತೆ ತಿಳಿಸಿದ್ದಾರೆ. ನಾನು ಅಲ್ಲಿಗೆ ಹೋಗಿ ಪ್ರಚಾರ ಮಾಡುವೆ ಎಂದು ಹೇಳಿದರು.