ಶಿವಮೊಗ್ಗ:
ಇಲ್ಲಿನ ಸೋಗಾನೆ ವಿಮಾನ ನಿಲ್ದಾಣಕ್ಕೆ ‘ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಡು ಕಂಡ ಶ್ರೇಷ್ಠ ಕವಿ ಕುವೆಂಪು ಅವರ ಕೊಡುಗೆ ಅಪಾರ. ಆದ್ದರಿಂದ ಅವರ ಹೆಸರೇ ಸೂಕ್ತ ಎಂದು ತೀರ್ಮಾನಿಸಲಾಗಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರುವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬರುವುದು ಖಚಿತವಾಗಿದೆ. ಅವರೇ ಅಂದು ಕುವೆಂಪು ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವರು ಎಂದ ಅವರು, ನಾಳೆ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಚಾರವನ್ನು ಎಲ್ಲರ ಸಮ್ಮುಖದಲ್ಲಿ ಚರ್ಚಿಸಿ ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಯೋಚನೆ ಮಾಡಿಲ್ಲ. ಇಷ್ಟು ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ರಾಜ್ಯದ ಜನರ ಸೇವೆಗೆ ಶ್ರಮಿಸಿದ್ದೇನೆ. ವಯಸ್ಸು 80ದ ಅಂಚಿನಲ್ಲಿದೆ. ಆದರೂ ಕೂಡ ಪಕ್ಷವನ್ನು ಬೂತ್ ಮಟ್ಟದಿಂದ ಬಲ ಪಡಿಸುವ ನಿಟ್ಟಿನಲ್ಲಿ ಅಧಿವೇಶನ ಮುಗಿದ ನಂತರ ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಳ್ಳುವ ತೀರ್ಮಾನ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ಕೈಗೊಳ್ಳಲಿದ್ದಾರೆ. ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಪಡೆದು ಪುನಃ ಅಧಿಕಾರಕ್ಕೆ ಬರಲಿದೆ. ಎಲ್ಲಿಯೇ ಹೋದರೂ ಯಡಿಯೂರಪ್ಪ ಎಂಬ ಘೋಷಣೆ ಕೇಳಿ ಬರುತ್ತಿದೆ. ಆದ್ದರಿಂದ ನನಗೆ ಈ ಬಾರಿಯ ಚುನಾವಣೆ ಸವಾಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಇದ್ದರು.