ವಿಜಯಪುರ :
ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದ್ದು, ಇನ್ನೇನು ಮುಂದಿನ ಸೋಮವಾರ ಹಬ್ಬ ಜೋರಾಗಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಭಕ್ತರು ಮಾಡಿಕೊಳ್ಳುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಗಣೇಶ ಚತುರ್ಥಿ ಅತ್ಯಂತ ಸಡಗರದಿಂದ ನಡೆಯಲಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಸಂಘಟನೆ ಮೂಲಕ ಹಬ್ಬ ಆಚರಿಸುತ್ತಾರೆ. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಂಪರ್ ಆಫರ್ ಘೋಷಿಸಿದ್ದಾರೆ.
ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಗಣೇಶ ಚತುರ್ಥಿ ಆಚರಿಸುವ ಭಕ್ತ ಮಂಡಳಿಗಳಿಗೆ ಭರವಸೆ ಒಂದನ್ನು ನೀಡಿದ್ದಾರೆ. ಇನ್ನು ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂಪೂರ್ಣ ಮಾಹಿತಿ ನೀಡಿದ್ದಾರೆ. ಪದೇ ಪದೆ ತಮ್ಮ ಭಾಷಣದ ಮೂಲಕ ಸುದ್ದಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ತಮ್ಮ ಘೋಷಣೆ ಮೂಲಕ ಸದ್ದು ಮಾಡುತ್ತಿದ್ದಾರೆ. ಹಾಗಾದರೆ ಬಸನಗೌಡ ಪಾಟೀಲ್ ಯತ್ನಾಳ್ ಕೊಟ್ಟಿರುವ ಮಾತು ಏನು? ಬಸನಗೌಡ ಯತ್ನಾಳ್ ಮಾಡಿರುವ ಟ್ವೀಟ್ನ ಪೂರ್ಣ ವಿವರ ಇಲ್ಲಿದೆ.
ಶಾಸಕ ಯತ್ನಾಳ್ ಟ್ವೀಟ್ ಇಲ್ಲಿದೆ!
1. ವಿಜಯಪುರದ ಪ್ರತಿ #ಗಜಾನನ_ಮಂಡಳಿಗಳಿಗೆ ಸ್ವಾತಂತ್ರ #ವೀರ_ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .
2. ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ನಿಮ್ಮ ನಿಮ್ಮ ಪೆಂಡಾಲ್ ಗಳಲ್ಲಿಯೇ ಬಂದು ನಮ್ಮ
#ಸ್ವಾಮಿ_ವಿವೇಕಾನಂದ_ಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ.
3. ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು.
4. ಈ ಬಾರಿ ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸಲ್ಪಡುವ ಗಜಾನನ ಮಹಾಮಂಡಳದ ವೇದಿಕೆಗೆ “ಸನಾತನ ಹಿಂದೂ ವೇದಿಕೆ” ಎಂದು ನಾಮಕರಣ ಮಾಡಲಾಗುವುದು.
5. ವಿಜಯಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ, ಯಾವ ನಿರ್ಬಂಧಗಳೂ ಇರುವುದಿಲ್ಲ.
ಹೀಗೆ ಟ್ವೀಟ್ ಮಾಡಿದ್ದಾರೆ ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೇಳಿಕೆ ಹಾಗೂ ಟ್ವೀಟ್ ಮೂಲಕವೇ ಸದಾ ಸದ್ದು ಮಾಡುವ, ಜೊತೆಗೆ ವಿವಾದದಕ್ಕೆ ಗುರಿಯಾಗುವ ಯತ್ನಾಳ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಯತ್ನಾಳ್ ಟ್ವೀಟ್ ಬಗ್ಗೆ ಈಗ ಪರ-ವಿರೋಧದ ಚರ್ಚೆ ಶುರುವಾಗಿದೆ. ಮತ್ತೊಂದು ಕಡೆ ಹಬ್ಬದ ಸಿದ್ಧತೆಯಲ್ಲಿರುವ ವಿಜಯಪುರ ವಿಧಾನಸಭಾ ಕ್ಷೇತ್ರದ ಗಜಾನನ ಭಕ್ತ ಮಂಡಳಿಗೆ ಶಾಸಕರಿಂದ ಭರವಸೆ ಸಿಕ್ಕಿದೆ.