ಬೆಳಗಾವಿ : ಯಮಕನಮರಡಿ CPI ಜಾವೇದ್ ಮುಶಾಪುರಿ ಅವರ ನೇತೃತ್ವದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು, ಇದೊಂದು ಅಪಘಾತವಲ್ಲ, ಉದ್ದೇಶಪೂರ್ವಕ ಕೊಲೆ ಮಾಡಿರುವ ಕೃತ್ಯ ಎನ್ನುವುದನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಹುಕ್ಕೇರಿ ತಾಲೂಕು ಹೊಸೂರು ಗ್ರಾಮದಲ್ಲಿ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ವೈಯಕ್ತಿಕ ದ್ವೇಷದ ಕಾರಣಕ್ಕೆ ವ್ಯಕ್ತಿಯೊಬ್ಬ ಬೈಕ್ ಫಾಲೋ ಮಾಡಿ ಕಾರು ಹಾಯಿಸಿ ಕೊಲೆ ಮಾಡಿದ್ದಾನೆ. ಆದರೆ, ಆರೋಪಿತರು ಹತ್ಯೆಗೆ ಸಂಚು ಮಾಡಿದ್ದ ವ್ಯಕ್ತಿ ಬಚಾವ್ ಆಗಿರುವುದು ಮಾತ್ರ ಕಾಕತಾಳೀಯ. ಬೇರೆಯ ವ್ಯಕ್ತಿಯೇ ಹತ್ಯೆಯಾಗಿದ್ದು ಇದೀಗ ಪೊಲೀಸರು ಈ ಸಂಬಂಧ ಆರೋಪಿಗಳನ್ನು ನಾಲ್ಕೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸೂರಿನ ಜಮೀನು ವಿವಾದದಲ್ಲಿ ಭೀಮಪ್ಪ ಡಬ್ಬುಗೋಳ ಹಾಗೂ ಆರೋಪಿತರ ಕುಟುಂಬಗಳ ನಡುವೆ ಆಸ್ತಿ ವಿವಾದ ಇತ್ತು. ಗ್ರಾಮದ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ಸಭೆ ನಡೆಸಿದ ನಂತರ ಸಿದ್ದಪ್ಪ ಮತ್ತು ಈಗ ಕೊಲೆಯಾದವ ಸೇರಿ ಕೆಲವರು ಬೈಕ್ ನಲ್ಲಿ ತಮ್ಮ ತಮ್ಮ ಮನೆಗೆ ಹೊರಟಿದ್ದರು. ಆಗ ಆರೋಪಿತರು ಬೈಕ್ ಮೇಲೆ ಹೊರಟವರನ್ನು ಕಾರ್ ಮೂಲಕ ಬೆನ್ನಟ್ಟಿ ಬೈಕ್ ಮೇಲೆ ಕಾರು ಚಲಾಯಿಸಿ ಸಿದ್ದಪ್ಪನ ಹತ್ಯೆಗೆ ಪ್ರಯತ್ನಿಸಿದ್ದರು. ಆದರೆ, ಕೊಲೆಯಾಗಬೇಕಿದ್ದ ಸಿದ್ದಪ್ಪ ಬಚಾವಾಗಿದ್ದಾನೆ. ಇವರ ತಪ್ಪಿಗೆ ಈಗ ಬೈಕ್ ಮೇಲೆ ಹೊರಟಿದ್ದ ವಿಠಲ ಸಾವಿನ ಮನೆ ಸೇರುವಂತಾಗಿದೆ. ಯಾವ ತಪ್ಪು ಮಾಡದ ವಿಠಲ ಈಗ ಹೆಣವಾಗಿದ್ದಾನೆ. ಜಮೀನು ವಿವಾದ ಸಂಬಂಧ ಕಾರು ಹಾಯಿಸಿ ಸಿನಿಮೀಯ ರೀತಿಯಲ್ಲಿ ವಿಠಲನನ್ನು ಕೊಲೆ ಮಾಡಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.