ಬೆಳಗಾವಿ: ಭಾನುವಾರ (ಫೆ.23) ನಡೆಯಲಿರುವ ಹುಕ್ಕೇರಿ ತಾಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಮಕನಮರಡಿ ಗ್ರಾಮ ಸಜ್ಜಾಗಿದೆ.
ಗಡಿಯಲ್ಲಿ ಕನ್ನಡ ಕಟ್ಟುವ ಕೈಂಕರ್ಯದಲ್ಲಿ ತೊಡಗಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಕನ್ನಡ ಬಾವುಟಗಳನ್ನು ಅಳವಡಿಸಲಾಗಿದ್ದು, ಗಡಿಯಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ.
ಬೆಳಗ್ಗೆ10ಕ್ಕೆ ಹುಣಸಿಕೊಳ್ಳ ಮಠದಲ್ಲಿ ನಡೆಯುವ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಶಾಸಕ ನಿಖಿಲ ಕತ್ತಿ ಗ್ರಂಥ ಬಿಡುಗಡೆಗೊಳಿಸುವರು. ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಉಪಸ್ಥಿತರಿರುವರು.
ನಂತರ ಎರಡು ವಿಚಾರ ಗೋಷ್ಠಿಗಳು, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಇಲ್ಲಿ ಚಿತ್ರಕಲೆ, ಪುಸ್ತಕಗಳು ಹಾಗೂ ಸ್ವಸಹಾಯ ಸಂಘಗಳು ಸಿದ್ಧಪಡಿಸಿ ವಸ್ತುಗಳ ಪ್ರದರ್ಶನವೂ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಹುಕ್ಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಅವಲಕ್ಕಿ ತಿಳಿಸಿದ್ದಾರೆ.