ಸವದತ್ತಿ : ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾಸ್ಥಳವಾಗಿರುವ ಸವದತ್ತಿ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನ ಬಂದ್ ಆಗಿಲ್ಲ. ಭಕ್ತರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಯಲ್ಲಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಹೇಳಿದ್ದಾರೆ.
ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಎರಡು-ಮೂರು ವರ್ಷದ ಅವಧಿಗೆ ಬಂದ್ ಮಾಡಲಾಗಿದೆಯೇ? ದೇವಿ ದರ್ಶನಕ್ಕೆ ಅವಕಾಶವಿಲ್ಲವೇ ಎಂದು ಹಲವು ಭಕ್ತರು ವಿಚಾರಿಸುತ್ತಿದ್ದಾರೆ. ಆದರೆ, ನಾವು ದೇವಸ್ಥಾನ ಬಂದ್ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಯಲ್ಲಮ್ಮ ದೇವಸ್ಥಾನದಲ್ಲಿ ದೇವಿಗೆ ಎಂದಿನಂತೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ ನೆರವೇರುತ್ತಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ದರ್ಶನಕ್ಕೆ ಅವಕಾಶವಿದೆ. ಹಾಗಾಗಿ ಭಕ್ತರು ಗುಡ್ಡಕ್ಕೆ ಭೇಟಿ ಕೊಟ್ಟು ದರ್ಶನ ಪಡೆಯಬಹುದು ಎಂದು ತಿಳಿಸಿದ್ದಾರೆ.
ಜನವರಿಯಲ್ಲಿ ಬನದ ಹುಣ್ಣಿಮೆ ಜಾತ್ರೆ ನಡೆಯಿತು. ಈಗ ಫೆಬ್ರವರಿಯಲ್ಲಿ ಭರತ ಹುಣ್ಣಿಮೆ ಜಾತ್ರೆಯೂ ಸುಗಮವಾಗಿ ನಡೆಯಲಿದೆ. ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದ್ದು, ಅವರಿಗೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸುತ್ತೇವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.