ಜನ ಜೀವಾಳ ಜಾಲ ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ, ಚುನಾವಣಾ ಅಕ್ರಮಗಳ ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರ ಪೊಲೀಸರಿಗಾಗಿ ಸುವರ್ಣಸೌಧದ ಕೇಂದ್ರಿಯ ಸಭಾಂಗಣದಲ್ಲಿ ನಡೆಯಿತು.
ಉತ್ತರ ವಲಯದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ, ವಿಜಯಪುರ ಜಿಲ್ಲೆಗಳ ಎಸ್ಪಿಗಳು, ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಡಿವೈಎಸ್ಪಿಗಳು, ಇನ್ಸಪೆಕ್ಟರಗಳು ಸೇರಿ 350ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಕೇಂದ್ರೀಯ ಸಭಾಂಗಣದಲ್ಲಿ ಸೇರಿ ಬಂದಿದ್ದರು.
ಉತ್ತರ ವಲಯ ಐಜಿಪಿ ಸತೀಶಕುಮಾರ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಚುನಾವಣಾ ಸಂದರ್ಭದಲ್ಲಿ ನಡೆಯುವ ರಾಜಕೀಯ ಘರ್ಷಣೆಗಳು, ಆಮಿಷಗಳು, ಕೋಟ್ಯಾಂತರ ಹಣ ವಿನಿಮಯ ಮತ್ತು ಹಂಚಿಕೆ, ಪರಸ್ಪರ ಹೊಡೆದಾಟ ಮತ್ತು ಪೈಪೋಟಿ, ಸಾರಾಯಿ ಹಂಚಿಕೆ ಸೇರಿ ಹತ್ತು ಹಲವಾರು ಕಾನೂನು ಬಾಹಿರ ಚಟುವಟಿಕೆಗಳನ್ನು ಸಮರ್ಥವಾಗಿ ಹತ್ತಿಕ್ಕಲು ಉತ್ತರ ವಲಯ ಜಿಲ್ಲೆಗಳ ಪೊಲೀಸರಿಗೆ ಸಿಐಡಿ ಕಾನೂನು ಕೋಶದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹೇಶ ವಿ. ವೈದ್ಯ ತರಬೇತಿ ನೀಡಿದರು.
ಹಿರಿಯ ಪೊಲೀಸ್ ಅಧಿಕಾರಿಗಳಾದ ಬೆಳಗಾವಿ ಎಸ್ಪಿ ಡಾ. ಸಂಜೀವ ಪಾಟೀಲ, ಗದಗ ಎಸ್ಪಿ. ಬಿ. ಆರ್. ನೇಮಗೌಡ, ಎಚ್. ಟಿ. ಸೋಮಶೇಖರ್, ವೇಣುಗೋಪಾಲ, ಪಿ. ವಿ. ಸ್ನೇಹಾ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದರು.