ಬೆಳಗಾವಿ: ಕಿತ್ತೂರು ತಾಲೂಕು ದೇವಗಾಂವ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೆಲ ಮಹಿಳೆಯರು ವಿಷದ ಬಾಟಲಿಯೊಂದಿಗೆ ಆಗಮಿಸಿ ಪ್ರತಿಭಟಿಸಿದರು. ಈ ಮೂಲಕ ಒಕ್ಕಲು ಎಬ್ಬಿಸಲು ಬಂದ ಅರಣ್ಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
12ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳೊಂದಿಗೆ ಬಂದಿದ್ದ ಅರಣ್ಯ ಅಧಿಕಾರಿಗಳನ್ನು ಜನರು ಜಮೀನು ಬಳಿಯೇ ತಡೆದರು. ಪೊಲೀಸರು ಸಂಧಾನಕ್ಕೆ ಯತ್ನಿಸಿದರು. ಆದರೆ ಬೆಳೆಯ ನಾಶಕ್ಕೆ ಒಪ್ಪದ ರೈತರು ಬೆಳೆ ಇಷ್ಟರಲ್ಲೇ ಕೈಗೆ ಬರುತ್ತದೆ. ಕೊಯ್ಲು ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. 1957 ರಿಂದ ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಪಹಣಿ ಪತ್ರಿಕೆಯ ಸಾಗುವಳಿದಾರರ ಕಲಮಿನಲ್ಲಿ ಕೆಲವರ ಹೆಸರುಗಳಿವೆ. ಆದರೂ ನಂತರ ಇದನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ ಎಂದು ಹೇಳಿದರು.
ನಾವು ಬಡವರು. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ ಅರಣ್ಯ ಅಧಿಕಾರಿಗಳು ಬೆಳೆನಾಶ ಮಾಡಿ ಸಸಿ ನೆಡಲು ಬಂದಿದ್ದಾರೆ. ಯಾವುದೇ ಕಾರಣಕ್ಕೆ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ರೈತರು ಮತ್ತು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆ ಪದಾಧಿಕಾರಿ ಎಂ.ಎಫ್. ಜಕಾತಿ, ಅಪ್ಪೇಶ ದಳವಾಯಿ, ಬಿಷ್ಡಪ್ಪ ಶಿಂದೆ ಆಗಮಿಸಿ ಟ್ರೆಂಚ್ ನಿರ್ಮಿಸಲು ಅವಕಾಶ ಮಾಡಿಕೊಡುತ್ತೇವೆ. ಆದರೆ, ರೈತರ ಬೆಳೆ ನಾಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಕೊನೆಗೆ ನಡೆದ ಸಂಧಾನದಲ್ಲಿ ಅರಣ್ಯ ಅಧಿಕಾರಿಗಳು ಮತ್ತು ರೈತರು ಪರಸ್ಪರ ಮಾತುಕತೆ ನಡೆಸಿ ಟ್ರೆಂಚ್ ತೋಡುವ ಕಾಮಗಾರಿ ನಡೆಸಲು ಒಪ್ಪಿಕೊಂಡರು.