ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಸರಕಾರ ಇದೀಗ ಸರಕಾರಿ ಮಾಂಟೇಸ್ಸರಿ ಆರಂಭಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಆರಂಭಿಸಿರುವ ಶ್ರೇಯಸ್ಸು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಲ್ಲುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅತ್ಯಂತ ಕ್ರಿಯಾಶೀಲ ಸಚಿವರು ಎನಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಂಗನವಾಡಿ ಕೇಂದ್ರಗಳ ಪುನಶ್ಚೇತನಕ್ಕೆ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎನಿಸಿಕೊಂಡಿದೆ. ಹಲವಾರು ಶಿಕ್ಷಣ ತಜ್ಞರು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ತವರು ಜಿಲ್ಲೆಯಾಗಿರುವ ಬೆಳಗಾವಿಯಲ್ಲೂ ಸರಕಾರಿ ಮಾಂಟೇಸ್ಸರಿ ಆರಂಭಿಸುವ ಮೂಲಕ ತಮ್ಮ ತವರಿಗೂ ವಿಶೇಷ ಕೊಡುಗೆ ನೀಡಲಿ ಎನ್ನುವುದು ಬೆಳಗಾವಿ ಜನತೆಯ ಒತ್ತಾಸೆಯಾಗಿದೆ.
ಬೆಂಗಳೂರು : ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಯೋಜನೆಯಡಿ ಆರಂಭಿಸಲಾಗಿರುವ ಸರ್ಕಾರಿ ಮಾಂಟೆಸ್ಸರಿ (L.K.G, UKG) ತರಗತಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಚಾಲನೆ ನೀಡಿದರು. ಬೆಂಗಳೂರಿನ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟೇಗಾರ ಪಾಳ್ಯದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಚಾಲನೆ ನೀಡಿದರು.
ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಪೂರ್ವ ಪ್ರಾಥಮಿಕ ಶಾಲೆಗಳಿಗೆ ಚಾಲನೆ ನೀಡಿದ್ದು, ಇನ್ಮುಂದೆ ನಮ್ಮ ಪುಟಾಣಿಗಳು ಅಂಗನವಾಡಿ ಕೇಂದ್ರಗಳಲ್ಲೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಲಿದ್ದಾರೆ. ಇಂದು ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಹಾಗೂ ರಾಜ್ಯಾದ್ಯಂತ 500 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಆರಂಭಗೊಳ್ಳಲಿವೆ.
ಅಂಗನವಾಡಿ ಹುಟ್ಟು ಹಾಕಿದ್ದೆ ಇಂದಿರಾ :
ಈಗ್ಗೆ 49 ವರ್ಷಗಳ ಹಿಂದೆ ಅಂದರೆ 1975ರಲ್ಲಿ, ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರು ಕರ್ನಾಟಕದಲ್ಲಿ ಮೊದಲ ಬಾರಿಗೆ ಅಂಗನವಾಡಿಯನ್ನು ಆರಂಭಿಸಿದರು. ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಮೊದಲ ಅಂಗನವಾಡಿ ಆರಂಭಗೊಂಡಿತು. ಆಗ ಆರಂಭಿಕವಾಗಿ 100 ಅಂಗನವಾಡಿ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ತೆರೆಯಲಾಯಿತು. ಈಗ ರಾಜ್ಯಾದ್ಯಂತ 70 ಸಾವಿರ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲೆ ಮೊಟ್ಟ ಮೊದಲು ಬಾರಿಗೆ ಅಂಗನವಾಡಿ ಆರಂಭವಾಗಿದ್ದೂ, ಕರ್ನಾಟಕದಲ್ಲಿ, ಪೂರ್ವ ಪ್ರಾಥಮಿಕ ಶಾಲೆ ಆರಂಭವಾಗುತ್ತಿರುವುದೂ ಕರ್ನಾಟಕದಲ್ಲೇ. ಇದು ನಮ್ಮ ರಾಜ್ಯದ ಹೆಗ್ಗಳಿಕೆ ಎಂದು ಹೇಳಿದರು.
*ಕಾರ್ಯಕರ್ತೆಯರ ಒತ್ತಡಕ್ಕೆ ಮಣಿದು ಆರಂಭ*
ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಶಿಕ್ಷಣ ಇಲಾಖೆಯಿಂದ ಆರಂಭಿಸುವ ಯೋಜನೆ ಇತ್ತು. ಆದರೆ, ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿದರು. ಶಿಕ್ಷಣ ಇಲಾಖೆ ಎಲ್ ಕೆಜಿ, ಯುಕೆಜಿ ಆರಂಭಿಸಿದರೆ ಅಂಗನವಾಡಿಯಿಂದ ಮಕ್ಕಳು ದೂರವಾಗುತ್ತಾರೆ. ಇದನ್ನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಆರಂಭಿಸಬೇಕು ಎಂದು ಒತ್ತಾಯಿಸಿದ್ದರು. ಕಾರ್ಯಕರ್ತೆಯರ ಒತ್ತಡದ ಹಿನ್ನೆಲೆ ಅಂಗನವಾಡಿಯಲ್ಲೇ ಎಲ್ ಕೆಜಿ, ಯುಕೆಜಿ ಆರಂಭಿಸಲಾಗಿದೆ ಎಂದರು.
*ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ, ಪೌಷ್ಠಿಕ ಆಹಾರ*
ಕಳೆದ 49 ವರ್ಷಗಳಿಂದ ಚಾಲ್ತಿಯಲ್ಲಿದ್ದ ನಮ್ಮ ಅಂಗನವಾಡಿ ಹೆಸರನ್ನೂ ಕೂಡ ಬದಲಾಯಿಸಿ, ಈಗ ಇವುಗಳಿಗೆ ‘ಸರ್ಕಾರೀ ಮಾಂಟೆಸ್ಸರಿ’ ಎಂದು ಹೆಸರು ಇಡಲಾಗಿದೆ. ಸಮಾಜದಲ್ಲಿ ಕೂಲಿ ಕೆಲಸ ಮಾಡುವವರಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳಿಗೂ ನಮ್ಮ ಮಕ್ಕಳಿಗೆ ಒಳ್ಳೆಯ ಗುಣಾತ್ಮಕ ಶಿಕ್ಷಣ ಕೊಡಿಸಬೇಕೆಂಬ ಆಸೆ ಇರುತ್ತದೆ. ಆದರೆ, ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ, ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
*ಮಾಂಟೆಸ್ಸರಿಗಳ ದುಬಾರಿ ಶುಲ್ಕಕ್ಕೆ ಕಡಿವಾಣ*
ಇತ್ತೀಚೆಗೆ ಖಾಸಗಿ ಮಾಂಟೆಸ್ಸರಿಗೆ ವರ್ಷಕ್ಕೆ 80 ರಿಂದ 1 ಲಕ್ಷ ರೂಪಾಯಿವರೆಗೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಅಷ್ಟೊಂದು ದುಬಾರಿ ಹಣವನ್ನು ಕೊಟ್ಟು ಜನಸಾಮಾನ್ಯರು ತಮ್ಮ ಮಕ್ಕಳನ್ನು ಮಾಂಟೆಸ್ಸರಿಗಳಿಗೆ ಕಳುಹಿಸಲು ಸಾಧ್ಯವಿದೆಯೇ ಪ್ರಶ್ನಿಸಿದ ಸಚಿವರು, ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು, ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಠಿಕ ಆಹಾರ ಪ್ರತಿ ಮಗುವಿಗೂ ದೊರೆಯಬೇಕೆಂಬುದು ನಮ್ಮೆಲ್ಲರ ಆಶಯ. ಹಾಗಾಗಿ ಉಚಿತವಾಗಿ ಮಾಂಟೆಸ್ಸರಿ ತರಗತಿಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
*ಮಾಂಟೆಸ್ಸರಿಗಳಲ್ಲೇ ಟಿಸಿ ನೀಡಿಕೆ*
ಸರ್ಕಾರಿ ಮಾಂಟೇಸ್ಸರಿಗಳಲ್ಲಿ ಕನ್ನಡ, ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲೂ ಶಿಕ್ಷಣ ನೀಡಲಾಗುವುದು. ಮಕ್ಕಳಿಗೆ 1 ಜೊತೆ ಯೂನಿಫಾರಂ, 1 ಬ್ಯಾಗ್ ಮತ್ತು ಪೆನ್ಸಿಲ್ ಬಾಕ್ಸ್ ನೀಡಲಾಗುವುದು. ಮಕ್ಕಳ ಮುಂದಿನ ಶೈಕ್ಷಣಿಕ ಮುನ್ನಡೆಗೆ ಸಹಾಯವಾಗಲು ಇಲ್ಲೇ ಟಿಸಿ ಕೂಡ ನೀಡಲಾಗುವುದು. ಈ ಮಾಂಟೆಸ್ಸರಿಗಳಲ್ಲಿ PUC, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆ ಮಾಡಲು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು.
*ಕಳಪೆ ಆಹಾರ ಪೂರೈಸಿದರೆ ಕ್ರಮ*
ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾದರೆ ಆಯಾಯ ಡಿಡಿ, ಸಿಡಿಪಿಓಗಳನ್ನು ಸಸ್ಪೆಂಡ್ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.
ಮಕ್ಕಳ ಭವಿಷ್ಯಕ್ಕೆ ನಮ್ಮ ಸರ್ಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ನಮ್ಮ ಇಲಾಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಕೃಷ್ಟವಾದ ಯೋಜನೆಗಳನ್ನು ಜನರಿಗೆ ನೀಡಲಿದೆ. ಇದಕ್ಕೆ ತಕ್ಕಂತೆ, ನೀವು ಕೂಡ ನಿಮ್ಮ ಕೌಶಲ್ಯ ಹೆಚ್ಚಿಸಿಕೊಂಡು, ಗುಣಮಟ್ಟದ ಶಿಕ್ಷಣ ನೀಡಲು ಸನ್ನದ್ದರಾಗಬೇಕು. ಅಂಗನವಾಡಿಗೆ ಬರುವ ಮಕ್ಕಳನ್ನು ನಿಮ್ಮ ಸ್ವಂತ ಮಕ್ಕಳಂತೆ ಬೆಳೆಸಬೇಕು ಎಂದು ಅಂಗನವಾಡಿ ಕಾರ್ಯಕರ್ತರಿಗೆ ಸಚಿವರು ಸಲಹೆ ನೀಡಿದರು.
*ರಾಜ್ಯಾದ್ಯಂತ 5 ಸಾವಿರ ಮಾಂಟೆಸ್ಸರಿಗಳ ಆರಂಭ*
ಸರ್ಕಾರಿ ಮಾಂಟೆಸ್ಸರಿಗಳನ್ನು ಈಗ ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ
ಆರಂಭಿಸಲಾಗುತ್ತಿದೆ.
ರಾಜ್ಯಾದ್ಯಂತ ಮೊದಲ ಹಂತದಲ್ಲಿ 5 ಸಾವಿರ ಸರ್ಕಾರಿ ಮಾಂಟೆಸ್ಸರಿಗಳನ್ನು ತೆರೆಯಲು ನಮ್ಮ ಇಲಾಖೆ ಸನ್ನದ್ಧವಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಈ ವೇಳೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ಇಲಾಖೆಯ ನಿರ್ದೇಶಕರಾದ ಎನ್.ಸಿದ್ದೇಶ್ವರ್, ವಿಕಲಾಂಗ ಇಲಾಖೆಯ ಆಯುಕ್ತರಾದ ದಾಸ್ ಸೂರ್ಯವಂಶಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಕಾವೇರಿಪುರ ವಾರ್ಡ್ ನ ಪ್ರಮುಖರು ಉಪಸ್ಥಿತರಿದ್ದರು.