- ತಿಂಗಳೊಳಗೆ ಬೆಳಗಾವಿ ಮೇಯರ್ಗೆ ಬೇಸತ್ತ ಪಾಲಿಕೆ..?
- ಪಾಲಿಕೆಯಲ್ಲೂ “ಜೆ” ಕಂಪನಿ ಆಡಳಿತ
- ಶಾಸಕರಿಗೆ, ಸೇವಕರಿಗೆ ಹಿಟ್ಲರ್ ನಂತೆ ಸೆಡ್ಡು ಹೊಡೆಯುತ್ತಿರುವ ಮೇಯರ್ ಪುತ್ರ..?
- “ಶೋಭೆ” ತರದ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮೊದಲ ಮೇಯರ್..!
ಬೆಳಗಾವಿ : ನಿರೀಕ್ಷಿಸಿದಂತೆ ಬಿಜೆಪಿ ಮೊದಲ ಮೇಯರ್ ಎಂಬ ಹೆಗ್ಗಳಿಕೆ ಹೊತ್ತ ಶೋಭಾ ಸೋಮನಾಚೆ ಅವರು ಪಕ್ಷಕ್ಕೆ ಶೋಭೆ ತರುವಂತೆ ಕೆಲಸ ಮಾಡುತ್ತಿಲ್ಲ ಎಂಬುದು ತಿಂಗಳೊಳಗೆ ಬಹಿರಂಗವಾಗಿದೆ. ಮೇಯರ್ ಆಗಿ ಬಿಜೆಪಿಯ ಎಲ್ಲ ನಗರಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಇವರು “ಬಂದ ಪುಟ್ಟ, ಹೋದ ಪುಟ್ಟ” ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಗರ ಸೇವಕರೊಂದಿಗೆ ಮೇಯರ್ ಅವಿಶ್ವಾಸ..?: ಅಧಿಕಾರ ವಹಿಸಿಕೊಂಡ ನಂತರ ಯಾರೊಬ್ಬ ನಗರಸೇವಕರ ದೂರವಾಣಿಯನ್ನು ಅವರು ಸ್ವೀಕರಿಸುತ್ತಿಲ್ಲ.ಇತ್ತೀಚೆಗಷ್ಟೇ ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ ಅವರ ದೂರವಾಣಿಯನ್ನು ಮೇಯರ್ ಸ್ವೀಕರಿಸಿಲ್ಲವಂತೆ. ಕಳೆದ ಕೆಲ ದಿನಗಳ ಹಿಂದೆ ಡೋಣಿ ಅವರು ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ಹತ್ತು ಬಾರಿ ದೂರವಾಣಿ ಕರೆ ಮಾಡಿದ್ದರಂತೆ. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ. ಹೀಗಾಗಿ ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಮೇಯರ ಪುತ್ರ ಅವರು ” ತುಮಿ ಮಲಾ ಫೋನ್ ಕರಾ ಮೇಡಂಲಾ ಕರೂನಕಾ ಮೀಚ್ ಸಗಳೇ ಬಗತೋ” (ನೀವು ಅವರಿಗೆ ಕಾಲ್ ಮಾಡಬೇಡಿ ನನಗೆ ಮಾಡಿ ನಾನೇ ಎಲ್ಲಾ ನೋಡೋದು) ಎನ್ನುತ್ತಾನಂತೆ ಇದರಿಂದ ಅಸಮಾಧಾನಗೊಂಡ ಆಡಳಿತ ಪಕ್ಷದ ನಾಯಕ ಡೋಣಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಇಂಗಿತವನ್ನು ತಮ್ಮಆಪ್ತರ ಸಮ್ಮುಖದಲ್ಲಿ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ. ಮೇಯರ್ ಅವರ ಈ ವರ್ತನೆಗೆ ಬಹುತೇಕ ನಗರಸೇವಕರು ಬೇಸತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.
ಪುತ್ರನಿಂದ ಹಿಟ್ಲರ್ ದರ್ಬಾರ್ ..!: ಶೋಭಾ ಹೆಸರಿಗೆ ಮಾತ್ರ ಮೇಯರ್ ಆಗಿದ್ದಾರೆ. ಆದರೆ ಪಾಲಿಕೆಯಲ್ಲಿ ಅವರ ಪುತ್ರನದ್ದೆ ದರ್ಬಾರ್ ..! ಇವರ ಮಗ ದೀಪಕ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾನೆಂದು ಹೇಳಲಾಗುತ್ತಿದೆ.
ಪಾಲಿಕೆಯಲ್ಲಿ ಅಧಿಕಾರಿಗಳು ನಡೆಸುವ ಸಭೆಯಲ್ಲಿ ಪುತ್ರನೇ ಹಾಜರಾಗಿ ಸೂಚನೆ ನೀಡುತ್ತಿರುವುದು ಅಧಿಕಾರಿಗಳಲ್ಲಿ ಮುಜುಗುರ ತಂದಿದೆ. ಈ ವಿಷಯ ಗೊತ್ತಾದ ಕೂಡಲೇ ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಹಸ್ತಕ್ಷೇಪ ಮಾಡದಂತೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಪುತ್ರ ದೀಪಕ ತಮ್ಮಆಪ್ತರ ಸಮ್ಮುಖದಲ್ಲಿ ಶಾಸಕರ ಬಗ್ಗೆಯೇ ‘ತೇ ಕೋನ್’ಎಂದು ಅಪಹಾಸ್ಯ ಮಾತುಗಳನ್ನಾಡುತ್ತಿರುವುದು ಚರ್ಚೆಯ ವಿಷಯವಾಗಿದೆ.
ಪಾಲಿಕೆಯಲ್ಲೂ “ಜೆ” ಕಂಪನಿ ಆಡಳಿತ: ಅಷ್ಟೇ ಅಲ್ಲದೆ ಮೇಯರ್ ಪುತ್ರ ದೀಪಕ ತಮ್ಮದೇ ಆದ ‘ಜೆ ಕಂಪನಿ’ ನಗರಸೇವಕರ ಗ್ರೂಪ್ ಮಾಡಿಕೊಂಡು ಶಾಸಕರ ಮಾತು ಮೀರಿ ಆಡಳಿತದಲ್ಲಿ ದರ್ಬಾರ್ ನಡೆಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಮರಾಠಿಯೇ ಬೇಕಂತೆ..?: ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ರಾಷ್ಟ್ರೀಯ ಪಕ್ಷದಿಂದ ಮೇಯರ್ ಆಗಿರುವ ಇವರಿಗೆ ಕನ್ನಡದಲ್ಲಿ ನೀಡಿರುವ ದಾಖಲೆ, ಕಡತ,ಅರ್ಜಿಗಳು ಹಾಗೂ ಇನ್ನಿತರ ಕಾಗದ ಪತ್ರಗಳನ್ನು ಇವರಿಗೆ ಮರಾಠಿಯಲ್ಲೇ ಬೇಕಂತೆ, ಅಷ್ಟೇ ಅಲ್ಲದೇ ಆ ಕಾಗದ ಪತ್ರಗಳನ್ನು ಒಮ್ಮೆ ಅವರ ಮಗ ನೋಡಿ ಓದಿ ಎಸ್ ಅಂದ ಮೇಲೆಯೇ ಇವರು ಸಹಿ ಮಾಡುತ್ತಾರಂತೆ. ಇವರ ಈ ನಡೆಗೆ ಹಾಗೂ ಮಗನ ಹಿಟ್ಲರ್ ದರ್ಬಾರ್ ಕ್ಕೆ ಅಧಿಕಾರಿಗಳು ಬೇಸತ್ತಿದ್ದಾರೆ. ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಆಯ್ಕೆಯಾಗಿರುವ ಬಿಜೆಪಿ ಮೇಯರ್ ಪಕ್ಷಕ್ಕೆ, ಶಾಸಕರಿಗೆ, ನಗರ ಸೇವಕರಿಗೆ ಹಾಗೂ ಅಧಿಕಾರಿಗಳಿಗೆ ನುಂಗಲಾರದ ತುಪ್ಪವಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಮೇಯರ್ ಈ ನಡತೆಯನ್ನು ಬಿಜೆಪಿಯವರು ಹತೋಟಿಗೆ ತಂದು ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಏನು ಮಾಡುತ್ತಾರೆ ಎಂದು ನೋಡಬೇಕು.