” ನಮಸ್ಕಾರಾ ಸರ್”
“ನಮಸ್ತೇ, ಯಾವಾಗ ಬಂದ್ರಿ ಕೌಲಾಲಂಪುರದಿಂದ?”
“ಈಗಷ್ಟೇ ಬಂದೆ.. ಸ್ಸಾರಿ ನಾನು ಕೌಲಾಲಂಪುರದಲ್ಲಿದ್ದಾಗ ನನ್ನ ಮೊಬೈಲ್ ಆಫ್ ಇತ್ತು…ಅದಕ್ಕೇ ತಮ್ಮೊಂದಿಗೆ ಮಾತನಾಡಿಲು ಆಗಲಿಲ್ಲ”
“ಪರ್ವಾಗಿಲ್ಲಾ….ಈಗಾ..ನೋಡೀ..ನಿಮ್ಮ ಪುಸ್ತಕದ ಹಸ್ತಪ್ರತಿ ಓದಿದೇ…
ಹೀಗೆ ಪ್ರಾರಂಭವಾಯಿತು ಫೋನಿನಲ್ಲಿ ಸಂಭಾಷಣೆ, ಈ ಮಾತುಕತೆ ನಡೆದಿದ್ದು, ಶ್ರೀ S L ಭೈರಪ್ಪನವರ ಮತ್ತು ನನ್ನ ನಡುವೆ, ಡಿಸೆಂಬರ್ ಐದನೇ ತಾರೀಖಿನಂದು. ಇದರ ಹಿನ್ನಲೆ ಏನು ಅಂತ ಚಿಕ್ಕದಾಗಿ ಹೇಳಿಬಿಡುತ್ತೇನೆ.
ಈ ವರ್ಷ ದಸರಾದ ನೆಪ ಮಾಡಿಕೊಂಡು ಮೈಸೂರಿಗೆ ನಾವು ಹೋಗಿದ್ದ ಮುಖ್ಯ ಉದ್ದೇಶವೇ ಶ್ರೀ ಭೈರಪ್ಪನವರನ್ನು ಭೇಟಿಮಾಡಲು. ಅವರ ಸುಪುತ್ರ ಉದಯಶಂಕರ್ ಮತ್ತು ಸೊಸೆ ಅನುರಾಧ ಉದಯಶಂಕರ್ ಅವರ ಸಹಾಯದಿಂದ ಕೈಯಲ್ಲಿ ನಮ್ಮ ಕನಸಿನ ಕೂಸು “ಹಸಿರು ಹಂಪೆ” ಕರಡುಪ್ರತಿಯನ್ನು ಕೈಯಲ್ಲಿ ಹಿಡಿದು ಅಂಜುತ್ತಾ, ಅಳುಕುತ್ತಾ ‘ಉದಯ ರವಿ’ ರಸ್ತೆಯ ಅವರ ಮನೆಯನ್ನು ಪ್ರವೇಶಿಸಿಯೇ ಬಿಟ್ಟೆವು ನಮ್ಮ ಶ್ರೀಮತಿ ಸುನಯನಾ ಮತ್ತು ಮಗಳು ಸುನಿಧಿಯೊಂದಿಗೆ.
ಭೈರಪ್ಪಾಜಿಯವರಿಗೆ ವಿಮಾನಗಳ, ವೈಮಾನಿಕ ಕ್ಷೇತ್ರದ ಬೆಳವಣಿಗೆಯ ವಿಷಯಗಳಲ್ಲಿ ಬಹಳ ಆಸಕ್ತಿ, ಅದು ನನ್ನ ವೃತ್ತಿಪರ ವಿಷಯವಾದ್ದರಿಂದ ಮೈಚಳಿ ಬಿಟ್ಟು ಮಾತನಾಡಲು ನನಗೂ ಅನುಕೂಲವಾಯಿತು. ಮಧ್ಯದಲ್ಲಿ ನನ್ನ ಪುಸ್ತಕದ ಬಗ್ಗೆಯೂ ಪ್ರಸ್ತಾಪಿಸಿ ಕರಡು ಪ್ರತಿಯನ್ನು ಅವರ ಕೈಗಿತ್ತು, ಕಾಲಿಗೆ ನಮಸ್ಕರಿಸಿ ಹೊರಬಂದೆವು.
ಉದಯ ಶಂಕರರೊಂದಿಗೆ ಮಾತನಾಡುತ್ತಾ ಅವರ ಶಿಸ್ತಿನ ದಿನಚರಿಯ, ಜೀವನ ಶೈಲಿಯ ಪರಿಚಯವಾಯಿತು. ‘ನೀವು ಏನೂ ತರೋದಕ್ಕೆ ಹೋಗಬೇಡಿ..ಹೊರಗಿನದ್ದೇನೂ ತಗೋಳಲ್ಲಾ, ನಮ್ಮ ಮನೆ ಪಕ್ಕದಲ್ಲೇ ಇಡೀ ಮೈಸೂರಿನಲ್ಲೇ ಪ್ರಸಿದ್ಧಿ ಪಡೆದ ಸಿಹಿತಿಂಡಿ ಅಂಗಡಿಯಿದೆ ಆದರೆ ಅದಲ್ಲಾ ಒಂಚೂರು ಮುಟ್ಟೊಲ್ಲಾ ಅಂದರು.
ದಸರಾ ಆದ ನಂತರ ಮಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿಯ ಸಮಾಚಾರಗಳು, ಭೈರಪ್ಪನವರ ಸಂದರ್ಶನಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರಿಸಿದವು. ನೋಡಿ, ಓದಿ ಖುಷಿಯಾಯಿತು. ಅದಾದ ಮುಂದಿನ ವಾರದಲ್ಲಿ ಕಾರ್ಯನಿಮಿತ್ತ ನಾನು ಮೂರುದಿನಗಳ ಮಟ್ಟಿಗೆ ಮಲೇಷ್ಯಾದ ರಾಜಧಾನಿ ಕೌಲಾಲಂಪುರಕ್ಕೆ ಹೋಗಬೇಕಾಯಿತು. ಅಲ್ಲಿದ್ದ ಅವಧಿಯಲ್ಲಿ ನನ್ನ ಮೊಬೈಲ್ ಆಫ್ ಮಾಡಿಟ್ಟಿದ್ದೆ. ಮೂರನೇ ದಿನ ಬೆಂಗಳೂರಿನ ಏರ್ಪೋರ್ಟ್ ತಲುಪಿದವನಿಗೆ ಆಶ್ಚರ್ಯ ಕಾದಿತ್ತು. ಉದಯಶಂಕರರವರ, ಭೈರಪ್ಪನವರಿಗೆ ಪರಿಚಯವಿರುವ ನನ್ನ ಇನ್ನೊಬ್ಬ ಏರ್ಫೋರ್ಸ್ ಮಿತ್ರ ವಿಂಗ್ ಕಮಾಂಡರ್ ಸ್ವರೂಪ್ ಅವರ SMS ಗಳು ನನಗಾಗೇ ಕಾಯುತ್ತಿದ್ದವು….”ಕೂಡಲೇ ಭೈರಪ್ಪನವರನ್ನು ಸಂಪರ್ಕಿಸಿ” ಎಂದು. ಕೂಡಲೇ ಸಂಪರ್ಕಿಸಿದಾಗ..
ಪ್ರಾರಂಭದಲ್ಲಿ ಬರೆದ ಸಂಭಾಷಣೆಗಳು ನಡೆದವು…ಹಾಗೇ ಮಾತು ಮುಂದುವರೆಸುತ್ತಾ…ಭೈರಪ್ಪನವರು ಹೇಳಿದರು
” ಈಗಾ..ನಿಮ್ಮ ಪುಸ್ತಕ ‘ಹಸಿರು ಹಂಪೆ’ ಯ ಹಸ್ತಪ್ರತಿ ಓದಿದೆ, ಚೆನ್ನಾಗಿ ಬರೆಯುತ್ತೀರಾ, ತುಂಬಾ ಸಂಶೋಧನೆಯನ್ನೂ ಮಾಡಿದ ಹಾಗೆ ಕಾಣುತ್ತದೆ. ನಾನು ನಿಮ್ಮ ಪುಸ್ತಕಕ್ಕೆ ಮುನ್ನುಡಿ ಬರೆದು ಡಿಸೆಂಬರ್ ಏಳನೇ ತಾರೀಖು ಕಳುಹಿಸುತ್ತೇನೆ. ಡಿಸೆಂಬರ್ 23 ರಂದು ಸಂತೇಶಿವಿರದಲ್ಲಿ ಯುವ ಬರಹಗಾರರಿಗೆಂದೇ ಒಂದು ದಿನದ ಕಾರ್ಯಾಗಾರವಿದೆ, ನಿಮ್ಮ ಪುಸ್ತಕವನ್ನು ಅಲ್ಲೇ ಬಿಡುಗಡೆ ಮಾಡೋಣವಂತೆ…ಅಲ್ಲಿಗೇ ಬಂದು ಬಿಡಿ”
ಅವರು ಇದನ್ನೆಲ್ಲಾ ಹೇಳುತ್ತಿರುವಾಗ ನಾನಾಗಲೇ ಖುಷಿಯಿಂದ ಬಾನಲ್ಲಿ ಹಾರಾಡುತ್ತಿದ್ದೆ…
ಮನ್ ಮೇ ಲಡ್ಡು ಫೂಟೇ..
ಎಲ್ಲವೂ ಕರಾರುವಕ್ಕಾಗಿ ಅವರ ಹೇಳಿದಂತೇ ನಡೆದು ಹೋಯಿತು. ಡಿಸೆಂಬರ್ ಏಳನೇ ತಾರೀಖು ಬೆಳಗ್ಗೆ ಹನ್ನೊಂದು ಗಂಟೆಗೆ ಸರಿಯಾಗಿ ಅವರ ಮುನ್ನುಡಿಯ ಅಂಚೆಮಿಂಚು ಬಂತು. ಡಿಸೆಂಬರ್ 23 ಕ್ಕೆ ಅವರ ಹುಟ್ಟೂರು ಸಂತೆ ಶಿವಿರದಲ್ಲಿ “ಹಸಿರು ಹಂಪೆ” ಅವರ ಅಮೃತಹಸ್ತಗಳಿಂದ ಲೋಕಾರ್ಪಣೆಯಾಯಿತು. ಕಾರ್ಯಕ್ರಮವೆಲ್ಲಾ ಮುಗಿದ ಮೇಲೆ, ಅವರು ವಿಶ್ರಮಿಸುತ್ತಿದ್ದ ರೂಮಿಗೆ ಪುನಃ ನನ್ನನ್ನು ಕರೆಸಿಕೊಂಡರು. ತುಂಬಾ ಹೊತ್ತು ಚರ್ಚೆ ನಡೆಯಿತು. ಅವರು ಮಾಡಿದ ಉಪದೇಶದ ಸಾರಾಂಶವೇನೆಂದರೆ, “ನಿಮ್ಮ ಸಂಶೋಧನೆ, ಬರವಣಿಗೆ ಇಲ್ಲಿಗೇ ಸೀಮಿತವಾಗಬಾರದು, ಇತಿಹಾಸಕ್ಕೆ ಪ್ರತಿಭದ್ದರಾಗಿ ಇನ್ನೂ ಮುಂದುವರೆಸಿ, ನಿಮಗೆ ಒಳ್ಳೆಯದಾಗಲೀ”
ನನ್ನ ಈ ಸಾಹಿತ್ಯಲೋಕದ ಯಾನ..ಪ್ರಾರಂಭವಾದದ್ದೇ ನಾಲ್ಕೈದು ವರ್ಷಗಳ ಹಿಂದೆ ಭೈರಪ್ಪನವರ “ಯಾನ” ಕಾದಂಬರಿಯ ಬಿಡುಗಡೆಯೊಂದಿಗೆ ಎನ್ನಬಹುದು. ಅಲ್ಲೀವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ಅಪರಿಚಿತನಂತಿದ್ದೆ. ಶ್ರೀಮತಿ ಅನುರಾಧ ಉದಯಶಂಕರ್ ಮತ್ತು ಶಶಾಂಕ್ ಪರಾಶರರ ಸಹಾಯದಿಂದ “ಭೈರಪ್ಪನವರ ಕೃತಿಗಳ ಅಭಿಮಾನಿಗಳು” ಎನ್ನುವ ಮುಖಹೊತ್ತಿಗೆಯ ಸಮೂಹಕ್ಕೆ ಸೇರ್ಪಡೆಯಾದೆ. ಈ ಗುಂಪಿನ ವೈಶಿಷ್ಟ್ಯತೆ ಏನೆಂದರೆ, ಸದಸ್ಯರು ಭೈರಪ್ಪನವರ ಕೃತಿಗಳ ಬಗ್ಗೆ ಅಥವಾ ಏನಾದರೂ ಸ್ವಂತಿಕೆ ಇರುವ ಬರಹಗಳನ್ನು ಪ್ರಕಟಿಸುತ್ತಿದ್ದರು. ನನಗೂ ಏನಾದರೂ ಬರೆಯಬೇಕೆನಿಸುತ್ತಿತ್ತು. ಆದರೆ ಏನು ಎನ್ನುವ ಗೊಂದಲವಿರುತ್ತಿತ್ತು. ವೈಮಾನಿಕ ವಿಷಯಗಳ ಬಗ್ಗೆ ಬರೆಯೋಣವೆಂದರೆ ತಾಂತ್ರಿಕ ಪದಗಳನ್ನು ಕನ್ನಡೀಕರಿಸಲು ಕಷ್ಟ, ವಾಯು ಸೇನೆಯ ವಿಷಯಗಳನ್ನು ಮುಕ್ತವಾಗಿ ಬರೆಯಲಾಗದು, ಆದರೆ ಅಲ್ಲಿಯ ಕೆಲವು ರೋಚಕ ಅನುಭವಗಳನ್ನು ಹೇಳಿಕೊಳ್ಳಬಹುದು..
ಎಂದು ತೀರ್ಮಾನಿಸಿ ಬರೆಯಲು ಪ್ರಾರಂಭಿಸದೆ. ಮೊದಲನೆಯದೇ “ಅರಣ್ಯಕಾಂಡ” ಅದೊಂದು ವಾಯುಸೇನೆಯ ಕೆಲವು ರೋಚಕ ಅನುಭವಗಳ ಒಂದು ಝಲಕ್. ಮುಂದೆ ಕಾಶ್ಮೀರದ ಬಗ್ಗೆ , ಸೈನ್ಯದ ಇತಿಹಾಸದ ಕೆಲವು ಘಟನೆಗಳ ಬಗ್ಗೆ, ಭಾರತೀಯ ಇತಿಹಾಸದ ಬಗ್ಗೆ..ಹೀಗೆ ವಾಯುಯಾನದ ಜೊತೆಗೆ ಸಾಹಿತ್ಯಯಾನವೂ ನೆರವೇರುತ್ತಿದೆ.
*ವಿಂಗ್ ಕಮಾಂಡರ್ ಸುದರ್ಶನ
ಭೈರಪ್ಪನವರ ಬಗ್ಗೆ ವಿಂಗ್ ಕಮಾಂಡರ್ ಸುದರ್ಶನ ಅಮೂಲ್ಯ ಮಾತು
