ಬೆಳಗಾವಿ :
ವಿಧಾನಸಭಾ ಚುನಾವಣೆಗೆ ಅಥಣಿ ವಿಧಾನಸಭಾ ಮತಕ್ಷೇತ್ರದಿಂದ ಈ ಬಾರಿ ಲಕ್ಷ್ಮಣ ಸವದಿ ಮತ್ತೆ ಸ್ಪರ್ಧೆ ನಡೆಸುತ್ತಾರಾ ಎಂಬ ಪ್ರಶ್ನೆ ಇದೀಗ ಅಥಣಿ ಮತಕ್ಷೇತ್ರದಿಂದ ವ್ಯಾಪಕವಾಗಿ ಹರಡಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಅಥಣಿ ಮತಕ್ಷೇತ್ರಾದ್ಯಂತ ತಮ್ಮ ಹಳೆಯ ನಂಟನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡಿರುವ ಅಥಣಿ ಸಾಹುಕಾರ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಾರೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಅವರ ನಿಕಟವರ್ತಿಗಳು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರು ರಾಜ್ಯಮಟ್ಟದ ನಾಯಕರಾಗಿದ್ದರಿಂದ ರಾಜ್ಯಾದ್ಯಂತ ಇತರ ಅಭ್ಯರ್ಥಿಗಳ ಗೆಲುವಿಗೆ ಹೆಚ್ಚಿನ ಶ್ರಮ ವಹಿಸಿದ್ದರು. ಹೀಗಾಗಿ ತಮ್ಮ ಸ್ವಕ್ಷೇತ್ರದ ಕಡೆ ಗಮನಹರಿಸಲು ಸಾಧ್ಯವಾಗದೆ ವಿರೋಧಿಗಳ ಅಪಪ್ರಚಾರದಿಂದಾಗಿ ಸೋಲು ಅನುಭವಿಸಿದ್ದರು. ಆದರೆ ಅವರ ಪಕ್ಷ ನಿಷ್ಠೆ ಮತ್ತು ಸಂಘಟನಾ ಚಾತುರ್ಯ ಗಮನಿಸಿದ ಪಕ್ಷ ನಂತರದ ದಿನಗಳಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದು ಇತಿಹಾಸ.
ಇದೀಗ ರಾಜ್ಯದ ಪ್ರಬಲ ಲಿಂಗಾಯತ ನಾಯಕ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ಇತಿಶ್ರೀ ಹಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮಾಜಕ್ಕೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಭದ್ರವಾಗಿರುವ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ವರಿಷ್ಠರು ಲಕ್ಷ್ಮಣ ಸವದಿ ಅವರನ್ನು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ತರುವ ಎಲ್ಲಾ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರನ್ನು ಅಥಣಿ ಮತಕ್ಷೇತ್ರದಲ್ಲಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಮೂಲಕ ಭಾರೀ ಕಾರ್ಯತಂತ್ರ ಹೆಣೆಯುತ್ತಿದೆ ಎನ್ನಲಾಗಿದೆ. ಒಟ್ಟಾರೆ, ಎರಡು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ಇದೀಗ ಕುತೂಹಲ ಮೂಡಿದೆ. ಅದರಲ್ಲೂ ಅಥಣಿ ಮತಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರ ಹೆಸರು ಚುನಾವಣೆ ದಿನ ಹತ್ತಿರವಾದಂತೆ ತೇಲಿ ಬರುತ್ತಿರುವುದು ವಿಶೇಷವಾಗಿ ಗಮನಿಸಬೇಕಾದ ಸಂಗತಿಯಾಗಿದೆ.