ಮಂಡ್ಯ :
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಖಾಡ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಮಂಡ್ಯ ಸಂಸದ ಸುಮಲತಾ ಅವರು ಬಿಜೆಪಿ ಸೂಚನೆ ನೀಡಿದರೆ ನಾನು ಸಹ ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಎದುರಿಸುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಜನ ಬದಲಾವಣೆ ಬಯಸಿದ್ದಾರೆ. ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸ್ಪರ್ಧೆಗಿಳಿದಿರುವ ಕುಮಾರಸ್ವಾಮಿ ಅವರು ಎರಡನೇ ಕ್ಷೇತ್ರವಾಗಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಕ್ಕೆ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಏ. 20ರಂದು ಅಮಾವಾಸ್ಯೆ ದಿನ ಎಚ್.ಡಿ.ಕುಮಾರಸ್ವಾಮಿ ಅವರು ಆದಿಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದಾರೆ ಎಂದು ಹೇಳಲಾಗಿದೆ. ಚುನಾವಣಾ ಆಯೋಗದ ಸೂಚನೆಯಂತೆ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬರೂ ಹೊಸ ಖಾತೆ ತೆರೆಯಬೇಕು. ಅದೇ ಖಾತೆಯಲ್ಲಿ ಚುನಾವಣಾ ವೆಚ್ಚ ನಿರ್ವಹಿಸುವಂತೆ ಆಯೋಗ ಆದೇಶಿಸಿರುವುದರಿಂದ ಕುಮಾರಸ್ವಾಮಿ ಅವರು ಹೊಸ ಬ್ಯಾಂಕ್ ಖಾತೆ ತೆರೆದಿದ್ದಾರೆ ಎನ್ನಲಾಗಿದೆ.
ನಾಮಪತ್ರ ಸಲ್ಲಿಸಲು ಏ.20 ಕೊನೆಯ ದಿನವಾಗಿದೆ. ಈವರೆಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಯಾರೊಬ್ಬರಿಗೂ ವರಿಷ್ಠರು ಬಿ-ಫಾರಂ ನೀಡಿಲ್ಲ. ಇದುವರೆಗೂ ದಳಪತಿಗಳು ನೀಡುವ ಬಿ-ಫಾರಂಗೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರು ಈಗ ನಿರಾಶರಾಗಿದ್ದಾರೆ. ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗುತ್ತಿರುವುದು ಹಲವರಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗಿಳಿಯುವರೆಂಬ ಮಾತುಗಳು ಆರಂಭದಿಂದಲೂ ಕೇಳಿಬಂದಿದ್ದವು. ಆ ಗಾಳಿ ಸುದ್ದಿಗೆ ಈಗ ರೆಕ್ಕೆ-ಪುಕ್ಕ ಮೂಡಿದೆ. ಅಭ್ಯರ್ಥಿ ಘೋಷಣೆ ವಿಳಂಬ ಮಾಡುತ್ತಿರುವುದು, ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಕಾಲಾವಕಾಶವಿದ್ದರೂ ಯಾರಿಗೂ ಬಿ-ಫಾರಂ ನೀಡದಿರುವುದನ್ನು ನೋಡಿದರೆ ಅಂತಿಮ ಘಳಿಗೆಯಲ್ಲಿ ಕುಮಾರಸ್ವಾಮಿಯವರೇ ಅಧಿಕೃತ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸುವ ಸಾಧ್ಯತೆಗಳು ನಿಚ್ಚಳವಾಗಿ ಕಂಡುಬರುತ್ತಿವೆ.
ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆಗಿಳಿಯುವುದು ಅಧಿಕೃತವಾಗಿ ಘೋಷಣೆಯಾಗದಿದ್ದರೂ ಬಿರುಸಿನ ಕಾರ್ಯಚಟುವಟಿಕೆಗಳು ಆರಂಭಗೊಂಡಿವೆ. ಅವರ ಬೆಂಬಲಿಗರು ಉಳಿದುಕೊಳ್ಳುವುದಕ್ಕೆ ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ರೂಮ್ಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಲಾಗಿದೆ. ಕುಮಾರಸ್ವಾಮಿ ಸ್ಪರ್ಧೆ ವಿಷಯ ಎಲ್ಲೆಡೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಕುಮಾರಸ್ವಾಮಿ ಸ್ಪರ್ಧೆಯಿಂದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆಯಾಗುವರೋ ಇಲ್ಲವೋ ಎನ್ನುವುದು ಈಗ ಕುತೂಹಲ ಕೆರಳಿಸಿದೆ. ಈಗಾಗಲೇ ಕಾಂಗ್ರೆಸ್ ಮಂಡ್ಯ ಕ್ಷೇತ್ರಕ್ಕೆ ಪಿ.ರವಿಕುಮಾರ್ ಗಣಿಗ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ, ಅವರಿಗಿನ್ನೂ ಬಿ-ಫಾರಂ ನೀಡದಿರುವುದು ಬದಲಾವಣೆಯ ಮುನ್ಸೂಚನೆ ನೀಡಿದಂತಾಗಿದೆ. ಮುಂದಿನ ಎರಡು ದಿನಗಳಲ್ಲಿ ರಾಜಕೀಯ ವಿದ್ಯಮಾನಗಳು ಬಿರುಸಾಗಿ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.