ಮುಂಬೈ:
ಮುಂಬೈ ಮಹಾನಗರವನ್ನು ಮಹಾರಾಷ್ಟ್ರ ರಾಜ್ಯದಿಂದ ಪ್ರತ್ಯೇಕಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವುದೇ ವಿಶೇಷ ಸಂಸತ್ ಅಧಿವೇಶನ ಕರೆದಿರುವ ಹಿಂದಿನ ಉದ್ದೇಶವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ ಪ್ರಧಾನಿ ನರೇಂದ್ರ ಮೋದಿ ಅವರು, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಾಗಲೀ, ನೋಟ್ ಬ್ಯಾನ್ ಅಥವಾ ಮಣಿಪುರ ಹಿಂಸೆ ವಿಚಾರವಾಗಿ ಎಂದಿಗೂ ವಿಶೇಷ ಅಧಿವೇಶನ ಕರೆದಿಲ್ಲ. ಇದೀಗ ಸರ್ಕಾರದ ಇಚ್ಛೆ ಮತ್ತು ಆಸಕ್ತಿಗನುಗುಣವಾಗಿ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವ ಸಾಧ್ಯತೆ ಇದೆ ಎಂದು ಕಿಡಿಕಾರಿದರು.
ಬಾಂಬೆ ಷೇರು ಪೇಟೆ ಹಾಗೂ ರಾಷ್ಟ್ರೀಯ ಷೇರು ಪೇಟೆಗಳನ್ನು ಗುಜರಾತ್ಗೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಏರ್ ಇಂಡಿಯಾ, ಅಂತಾರಾಷ್ಟ್ರೀಯ ಹಣಕಾಸು ಕೇಂದ್ರ ಕಚೇರಿಗಳು ಮತ್ತು ವಜ್ರದ ಮಾರುಕಟ್ಟೆಯನ್ನು ನಗರದಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಕಿಡಿಕಾರಿದರು. ಸೆ.18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ.