ಬೆಳಗಾವಿ :
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ, ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಲೋಕಸಭಾ ಚುನಾವಣೆಯ ಜವಾಬ್ದಾರಿಯನ್ನು ವಹಿಸದೇ ಇರುವುದು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಎರಡು ದಿನಗಳ ಹಿಂದಷ್ಟೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರ್ನಾಟಕ ಸೇರಿದಂತೆ ದೇಶದ ಲೋಕಸಭಾ ಚುನಾವಣೆಯ ಉಸ್ತುವಾರಿ ಜವಾಬ್ದಾರಿಯನ್ನು ಪ್ರಮುಖ ನಾಯಕರಿಗೆ ವಹಿಸಿಕೊಟ್ಟಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ಅತ್ಯಂತ ಪ್ರಬಲ ನಾಯಕಿ. ಪಕ್ಷ ಕಟ್ಟುವಲ್ಲಿ ಅತ್ಯಂತ ಚತುರೆ, ಶ್ರೇಷ್ಠ ಸಂಘಟಕಿ ಹಾಗೂ ಜನನಾಯಕಿ ಎಂದೇ ಜನಮನದಲ್ಲಿ ಗುರುತಿಸಿಕೊಂಡವರು. ಪಕ್ಷ ಯಾವುದೇ ಜವಾಬ್ದಾರಿ ವಹಿಸಲಿ, ಅದನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬರುವ ಪಕ್ಷ ನಿಷ್ಠೆಯು ಆಗಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಇದೀಗ ರಾಜ್ಯದ 28 ಲೋಕಸಭಾ ಮತಕ್ಷೇತ್ರಗಳಿಗೆ ಸಂಬಂಧಿಸಿ ಆಯಾ ಕ್ಷೇತ್ರಗಳನ್ನು ಕಾಂಗ್ರೆಸ್ ತೆಕ್ಕೆಗೆ ತಂದು ಕೊಡುವ ದೆಸೆಯಲ್ಲಿ ಸಮರ್ಥ ಸಚಿವರಿಗೆ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಿದೆ. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಾತ್ರ ಯಾವುದೇ ಲೋಕಸಭಾ ಕ್ಷೇತ್ರದ ಜವಾಬ್ದಾರಿಯನ್ನು ನೀಡಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ. ಆ ಜಿಲ್ಲೆಯ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಸಹಾ ಬೇರೆಯವರಿಗೆ ವಹಿಸಲಾಗಿದೆ. ಜೊತೆಗೆ ತವರು ಬೆಳಗಾವಿ ಜಿಲ್ಲೆಯಲ್ಲೂ ಸಹಾ ಅವರಿಗೆ ಜವಾಬ್ದಾರಿಯನ್ನು ವಹಿಸಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸತೀಶ ಜಾರಕಿಹೊಳಿ ಅವರಿಗೆ ಜವಾಬ್ದಾರಿ ನೀಡಲಾದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಉಸ್ತುವಾರಿಯನ್ನು ಹಿರಿಯ ಸಚಿವ ಎಚ್ .ಕೆ.ಪಾಟೀಲ ಅವರಿಗೆ ನೀಡಲಾಗಿದೆ.
ಒಟ್ಟಾರೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಯಾವ ಕಾರಣಕ್ಕಾಗಿ ಲೋಕಸಭಾ ಚುನಾವಣೆಯ ಉಸ್ತುವಾರಿ ನೀಡಿಲ್ಲ ಎನ್ನುವುದು ಸಾಕಷ್ಟು ಅನುಮಾನ ಹಾಗೂ ಚರ್ಚೆಗೆ ಕಾರಣವಾಗಿದೆ.