ಭುವನೇಶ್ವರ :
ವಿದ್ಯಾರ್ಥಿಗಳು ಈ ಶಾಲೆಗೆ ಬರಲು ಹೆದರುವುದು ಏಕೆ ಗೊತ್ತೆ ? ಕೊನೆಗೂ ಈ ಶಾಲೆಯ ನೆಲಸಮಕ್ಕೆ ರಾಜ್ಯ ಸರಕಾರವೇ ಮುಂದಾದ ಬೆಳವಣಿಗೆ ನಡೆದಿದೆ.
ತ್ರಿವಳಿ ರೈಲು ದುರಂತದಲ್ಲಿ ಮೃತರಾದವರ ಶವಗಳನ್ನು ಇರಿಸಿದ್ದ 65 ವರ್ಷ ಹಳೆಯದಾದ ಬಹನಾಗ ಗ್ರಾಮದ ಪ್ರೌಢ ಶಾಲೆಯ ಕಟ್ಟಡವನ್ನು ಕೆಡವಲು ಸರ್ಕಾರ ಶುಕ್ರವಾರ ಅನುಮತಿ ನೀಡಿದೆ.
ಶಾಲೆಯಲ್ಲಿ ಶವ ಇಟ್ಟ ಕಾರಣ ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದು, ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಚಿಂತನೆ ನಡೆಸಿದ್ದಾರೆ. ಶಾಲಾ ಕಟ್ಟಡ ಹಳೆಯದಾಗಿದೆ. ಆದ್ದರಿಂದ ಕಟ್ಟಡ ನವೀಕರಣ ಮಾಡುವಂತೆ ಶಾಲಾ ಆಡಳಿತ ಮಂಡಳಿ (ಎಸ್ಎಂಸಿ) ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಹಿರಿಯ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ಶಾಲೆ ಮರು ನಿರ್ಮಾಣಕ್ಕೆ ಅನುಮತಿ ನೀಡಿದರು.
ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ತರಗತಿಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಯನ್ನಾಗಿ ಮಾಡುವ ಪ್ರಸ್ತಾವನೆಗೂ ಅನುಮೋದನೆ ನೀಡಿದರು.
ಮಕ್ಕಳು ಮತ್ತು ಪಾಲಕರ ಮನಸ್ಸಿನಲ್ಲಿರುವ ಭಯ ಹೋಗಲಾಡಿಸಲು ಸಮಾಲೋಚನೆ (ಕೌನ್ಸೆಲಿಂಗ್) ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಲಾಗುವುದು ಎಂದು ಶಾಲೆ ಮತ್ತು ಸಮೂಹ ಶಿಕ್ಷಣ ಇಲಾಖೆ ಕಾರ್ಯದರ್ಶಿ ಎಸ್.ಅಶ್ವಥಿ ತಿಳಿಸಿದರು.