ಭೋಪಾಲ್ :
ಮಧ್ಯಪ್ರದೇಶ ವಿಧಾನಸಭಾ ಚುನಾವಣೆ 2023 ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಪೂರ್ಣ ಬಹುಮತಕ್ಕಿಂತ ಸ್ವಲ್ಪ ಕಡಿಮೆ ಸ್ಥಾನ ಗಳಿಸುವ ಸಾಧ್ಯತೆಯಿದೆ, ಎದುರಾಳಿ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ದಾಟಬಹುದು ಎಂದು ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಕನಿಷ್ಠ 116 ಸ್ಥಾನಗಳನ್ನು ಪಡೆಯಬೇಕು. ಸಮೀಕ್ಷೆಯ ಪ್ರಕಾರ, ಬಿಜೆಪಿ 102-110 ಸ್ಥಾನಗಳನ್ನು ಗೆಲ್ಲಬಹುದು. ಮತ್ತು ಕಾಂಗ್ರೆಸ್ ಪಕ್ಷವು 118-128 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಮತ ಹಂಚಿಕೆಯ ಬಗ್ಗೆ ಹೇಳುವುದಾದರೆ, ಸಮೀಕ್ಷೆಯ ಹೇಳುವ ಪ್ರಕಾರ ಸದ್ಯಕ್ಕೆ ಎರಡು ಪಕ್ಷಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಬಿಜೆಪಿಯು ಒಟ್ಟು ಶೇ.41.02 ರಷ್ಟು ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಶೇ. 40.89ರಷ್ಟು ಮತಗಳನ್ನು ಪಡೆಯಲಿದೆ. ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ಶೇ.1.29 ಮತ್ತು ಇತರರು ಶೇ.0.43ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.
38 ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದ ಮಹಾಕೌಶಲ್ ಪ್ರದೇಶದಲ್ಲಿ ಬಿಜೆಪಿ 18-22 ಸ್ಥಾನಗಳನ್ನು ಪಡೆಯಬಹುದು ಮತ್ತು ಕಾಂಗ್ರೆಸ್ 16-20 ಸ್ಥಾನಗಳನ್ನು ಗಳಿಸಬಹುದು.
38 ಸ್ಥಾನಗಳನ್ನು ಹೊಂದಿರುವ ಗ್ವಾಲಿಯರ್-ಚಂಬಲ್ ಪ್ರದೇಶದ ಬಗ್ಗೆ ಹೇಳುವುದಾದರೆ, ಬಿಜೆಪಿ 4-8 ಸ್ಥಾನಗಳನ್ನು ಮಾತ್ರ ಪಡೆಯಬಹುದು ಮತ್ತು ಈ ಪ್ರದೇಶದಲ್ಲಿ ಕಾಂಗ್ರೆಸ್ 26-30 ಸ್ಥಾನಗಳನ್ನು ಪಡೆಯಬಹುದು.
36 ಸ್ಥಾನಗಳನ್ನು ಹೊಂದಿರುವ ರಾಜ್ಯದ ಮಧ್ಯ ಭಾಗದಲ್ಲಿ ಬಿಜೆಪಿ 22-24 ಸ್ಥಾನಗಳನ್ನು ಪಡೆಯಬಹುದು ಮತ್ತು ಕಾಂಗ್ರೆಸ್ 12-14 ಸ್ಥಾನಗಳನ್ನು ಗೆಲ್ಲಬಹುದು. 26 ಸ್ಥಾನಗಳನ್ನು ಹೊಂದಿರುವ ಬುಂದೇಲ್ಖಂಡ್ ಪ್ರದೇಶದಲ್ಲಿ ಕಾಂಗ್ರೆಸ್ 11-13 ಸ್ಥಾನಗಳನ್ನು ಗಳಿಸಬಹುದು ಮತ್ತು ಬಿಜೆಪಿ 13-15 ಸ್ಥಾನಗಳನ್ನು ಗೆಲ್ಲಬಹುದು.
30 ಸ್ಥಾನಗಳನ್ನು ಹೊಂದಿರುವ ವಿಂಧ್ಯಾ ಪ್ರದೇಶದಲ್ಲಿ ಕೇಸರಿ ಪಕ್ಷವು ಇಲ್ಲಿ ಪ್ರಬಲವಾಗಿ ಹೊರಹೊಮ್ಮಬಹುದು ಮತ್ತು 19-21 ಸ್ಥಾನಗಳನ್ನು ಪಡೆಯಬಹುದು ಮತ್ತು ಕಾಂಗ್ರೆಸ್ ಸುಮಾರು 8-10 ಸ್ಥಾನಗಳನ್ನು ಗೆಲ್ಲಬಹುದು. 66 ಸ್ಥಾನಗಳನ್ನು ಹೊಂದಿರುವ ಮಾಲ್ವಾ ಪ್ರದೇಶದಲ್ಲಿ ಬಿಜೆಪಿ 20-24 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 41-45 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.