ನವದೆಹಲಿ: ಬಾಲಿವುಡ್ನ ‘ಪಠಾಣ್’, ‘ಟೈಗರ್’ ಅಥವಾ ‘ಧುರಂಧರ್’ ಅಂತಹ ಸಿನಿಮಾಗಳಲ್ಲಿ ಹೀರೊಗಳು ಶತ್ರು ರಾಷ್ಟ್ರದೊಳಗೆ ನುಗ್ಗಿ ಸಾಹಸ ಮಾಡುವುದನ್ನು ನೋಡಿದ್ದೇವೆ. ಆದರೆ, ಬೆಳ್ಳಿತೆರೆಯ ಈ ಕಲ್ಪಿತ ಕಥೆಗಳಿಗಿಂತಲೂ ಮಿಗಿಲಾದ ಹಾಗೂ ಅದ್ಭುತವಾದ ಮತ್ತು ರೋಚಕವಾದ ಜೀವನ ನಡೆಸಿದ ಅಪ್ಪಟ ದೇಶಭಕ್ತ ರವೀಂದ್ರ ಕೌಶಿಕ ಅವರ ಬಗ್ಗೆ ಅನೇಕರಿಗೆ ತಿಳಿದಿಲ್ಲವೇನೋ?
ಶತ್ರು ರಾಷ್ಟ್ರವಾದ ಪಾಕಿಸ್ತಾನದ ಗುಂಡಿನ ನೆರಳಲ್ಲೇ ನಿಂತು, ಅವರದ್ದೇ ಸೇನೆಯನ್ನು ಸೇರಿ, ಅಲ್ಲಿಯೇ ಕೆಲಸ ಮಾಡುತ್ತ ದಶಕಗಳ ಕಾಲ ಭಾರತಕ್ಕೆ ರಕ್ಷಾಕವಚವಾಗಿದ್ದ ಈ ಅಪ್ರತಿಮ ವೀರನ ಹೆಸರೇ ರವೀಂದ್ರ ಕೌಶಿಕ. ಇವರು ಭಾರತೀಯ ಗುಪ್ತಚರ ಇತಿಹಾಸದ ದ್ರುವತಾರೆ.
ಭಾರತದ ಗುಪ್ತಚರ ಸಂಸ್ಥೆ ರಾ (RAW)ದ ಅತ್ಯಂತ ಧೈರ್ಯಶಾಲಿ ಏಜೆಂಟ್ ಆಗಿದ್ದ ಇವರನ್ನು ಇಂದಿಗೂ ಜಗತ್ತು ‘ಬ್ಲ್ಯಾಕ್ ಟೈಗರ್’ ಎಂದೇ ಗುರುತಿಸುತ್ತದೆ.
ರಂಗಭೂಮಿಯಿಂದ ಗುಪ್ತಚರ ಲೋಕಕ್ಕೆ ಪಯಣ
ರವೀಂದ್ರ ಕೌಶಿಕ ಅವರು ಏಪ್ರಿಲ್ 11, 1952 ರಂದು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಜನಿಸಿದರು. ಗಡಿ ಭಾಗದಲ್ಲೇ ಬೆಳೆದಿದ್ದರಿಂದ ಅವರಿಗೆ ಪಂಜಾಬಿ ಮತ್ತು ಸ್ಥಳೀಯ ಉಪಭಾಷೆಗಳ ಮೇಲೆ ಉತ್ತಮ ಹಿಡಿತವಿತ್ತು. ಶ್ರೀಗಂಗಾನಗರದ ಎಸ್ಡಿ ಬಿಹಾನಿ ಕಾಲೇಜಿನಲ್ಲಿ ಓದುತ್ತಿದ್ದಾಗ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು, ಅತ್ಯುತ್ತಮ ನಟನಾ ಕೌಶಲ ಹೊಂದಿದ್ದರು.
1973ರಲ್ಲಿ ಲಕ್ನೋದಲ್ಲಿ ನಡೆದ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಭಾರತೀಯ ಸೈನಿಕನ ಪಾತ್ರವನ್ನು ನಿರ್ವಹಿಸುತ್ತಿದ್ದಾಗ ‘ರಾ’ (R&AW) ಅಧಿಕಾರಿಗಳ ಕಣ್ಣು ಇವರ ಮೇಲೆ ಬಿತ್ತು. ಈ ನಾಟಕೋತ್ಸವದಲ್ಲಿ ‘ಸೈನಿಕ’ನ ಪಾತ್ರವನ್ನು ಎಷ್ಟು ಜೀವಂತವಾಗಿ ನಿರ್ವಹಿಸಿದರೆಂದರೆ, ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ‘ರಾ’ (R&AW) ಅಧಿಕಾರಿಗಳು ಬೆರಗಾದರು. ಅಲ್ಲಿಂದ ಆರಂಭವಾಯಿತು ಇವರ ಅಸಲಿ ಬದುಕು.
ಒಬ್ಬ ನಟನಿಗೆ ತನ್ನ ಪಾತ್ರವೇ ಪ್ರಾಣವಾಗುತ್ತದೆ. ಆದರೆ ಕೌಶಿಕ್ ಅವರಿಗೆ ದೇಶವೇ ಪ್ರಾಣ’ವಾಗಿತ್ತು. ದೆಹಲಿಯಲ್ಲಿ ಕಠಿಣ ತರಬೇತಿ ಪಡೆದ ಇವರು, ಇಸ್ಲಾಂ ಧರ್ಮದ ಆಚರಣೆಗಳು, ಪಾಕಿಸ್ತಾನಿ ಉರ್ದು ಶೈಲಿ ಮತ್ತು ಅಲ್ಲಿನ ಭೂಪಟವನ್ನು ಕರಗತ ಮಾಡಿಕೊಂಡರು.
ಪಾಕ್ ಸೇನೆಯಲ್ಲಿ ‘ನಬಿ ಅಹಮದ್ ಶಾಕಿರ್’ ಆಗಿ ಕೆಲಸ…
1975ರಲ್ಲಿ ಕೇವಲ 23ನೇ ವಯಸ್ಸಿನಲ್ಲಿ ನಬಿ ಅಹಮದ್ ಶಾಕಿರ್ ಎಂಬ ಹೊಸ ಹೆಸರಿನೊಂದಿಗೆ ರವೀಂದ್ರ ಕೌಶಿಕ ಅವರು ಪಾಕಿಸ್ತಾನ ಪ್ರವೇಶಿಸಿದರು. ಅಲ್ಲಿನ ಕರಾಚಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಅವರು, ಚಾಕಚಕ್ಯತೆಯಿಂದ ಪಾಕಿಸ್ತಾನ ಸೇನೆಯನ್ನು ಸೇರುವಲ್ಲಿ ಯಶಸ್ವಿಯಾದರು. ಕಾಲಾನಂತರದಲ್ಲಿ ಅವರು ಅಲ್ಲಿ ‘ಮೇಜರ್’ ಹುದ್ದೆಗೆ ಏರಿದರು. ಇದು ಅವರ ಬುದ್ಧಿವಂತಿಕೆಗೆ ಸಾಕ್ಷಿ. ಈ ಅವಧಿಯಲ್ಲಿ ಅವರು ಅಮಾನತ್ ಎಂಬ ಪಾಕಿಸ್ತಾನಿ ಮಹಿಳೆಯನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರನೂ ಜನಿಸಿದ್ದ.
ಭಾರತಕ್ಕೆ ನೀಡಿದ ಅಮೂಲ್ಯ ಮಾಹಿತಿ
1979 ರಿಂದ 1983 ರವರೆಗೆ ಕೌಶಿಕ ಅವರು ಭಾರತಕ್ಕೆ ಅತ್ಯಂತ ನಿರ್ಣಾಯಕ ಮಾಹಿತಿಗಳನ್ನು ಕಳುಹಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪಾಕಿಸ್ತಾನಿ ಸೇನೆಯ ಚಲನವಲನಗಳ ವಿವರಗಳು, ಪಂಜಾಬ್ ಗಡಿಯಲ್ಲಿನ ಪಾಕಿಸ್ತಾನದ ಸೇನಾ ವ್ಯೂಹಗಳು, ಪಾಕಿಸ್ತಾನದ ಕಹೂಟಾದಲ್ಲಿರುವ ಪರಮಾಣು ಕಾರ್ಯಕ್ರಮದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿತ್ತು.
ಅವರ ಈ ಅಪಾರ ಸೇವೆಯನ್ನು ಮೆಚ್ಚಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕೌಶಿಕ ಅವರಿಗೆ “ಬ್ಲ್ಯಾಕ್ ಟೈಗರ್” ಎಂಬ ಬಿರುದು ನೀಡಿ ಗೌರವಿಸಿದ್ದರು.
ಜೈಲು ವಾಸ
ಕೌಶಿಕ ಅವರ ಯಶಸ್ವಿ ಕಾರ್ಯಾಚರಣೆಗೆ 1983ರಲ್ಲಿ ಅಡ್ಡಿ ಉಂಟಾಯಿತು. ಅವರನ್ನು ಭೇಟಿಯಾಗಲು ‘ರಾ’ ಕಳುಹಿಸಿದ್ದ ಇನಾಯತ್ ಮಸಿಹ್ ಎಂಬ ಜೂನಿಯರ್ ಏಜೆಂಟ್ ಪಾಕಿಸ್ತಾನಿ ಐಎಸ್ಐ (ISI) ಕೈಗೆ ಸಿಕ್ಕಿಬಿದ್ದರು. ಪಾಕಿಸ್ತಾನದ ಚಿತ್ರಹಿಂಸೆ ತಾಳಲಾರದೆ ಕೌಶಿಕ ಅವರ ಬಗ್ಗೆ ಬಾಯ್ಬಿಟ್ಟರು. ಪರಿಣಾಮವಾಗಿ, ಸೆಪ್ಟೆಂಬರ್ 1983ರಲ್ಲಿ ಮುಲ್ತಾನ್ನ ಪಾರ್ಕ್ವೊಂದರಲ್ಲಿ ಕೌಶಿಕ ಅವರನ್ನು ಬಂಧಿಸಲಾಯಿತು.
ಬಂಧನದ ನಂತರ ಸಿಯಾಲ್ ಕೋಟ್, ಕೋಟ್ ಲಖ್ಪತ್ ಮತ್ತು ಮಿಯಾನ್ವಾಲಿ ಜೈಲುಗಳಲ್ಲಿ ಅವರಿಗೆ ಅತೀವ ಹಿಂಸೆ ನೀಡಲಾಯಿತು. 1985ರಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತು, ನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಲಾಯಿತು.
ದುರಂತ ಅಂತ್ಯ
ಜೈಲಿನಲ್ಲಿದ್ದಾಗಲೇ ಕೌಶಿಕ್ ಅವರು ಕ್ಷಯರೋಗ (TB) ಮತ್ತು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದರು. ಸುದೀರ್ಘ 18 ವರ್ಷಗಳ ಜೈಲು ವಾಸದ ನಂತರ, ನವೆಂಬರ್ 21, 2001 ರಂದು ಮಿಯಾನ್ವಾಲಿ ಸೆಂಟ್ರಲ್ ಜೈಲಿನಲ್ಲಿ ಭಾರತದ ಈ ವೀರ ಪುತ್ರ ಕೊನೆಯುಸಿರೆಳೆದರು. ಬೆಳ್ಳಿತೆರೆಯ ಕಥೆಗಳಿಗಿಂತಲೂ ಮಿಗಿಲಾದ ರವೀಂದ್ರ ಕೌಶಿಕ್ ಅವರ ಈ ತ್ಯಾಗ ಮತ್ತು ಸಾಹಸ ಭಾರತೀಯ ಇತಿಹಾಸದ ಪುಟಗಳಲ್ಲಿ ಎಂದಿಗೂ ಅಜರಾಮರ.


