“ಜನಜೀವಾಳ” ಹಾಗೂ “ಏಳುಕೋಟಿ”. ಬೆಳಗಾವಿ ಜಿಲ್ಲೆಯಲ್ಲಿ ಈ ಹೆಸರು ಕೇಳದವರೇ ವಿರಳಾತಿ ವಿರಳ ಎನ್ನಬಹುದು. ಅಷ್ಟೊಂದು ಪ್ರಮಾಣದಲ್ಲಿ ಈ ಎರಡು ಹೆಸರುಗಳು ಅತ್ಯಂತ ಅವಿನಾಭಾವವಾಗಿ ಬೆಸೆದುಕೊಂಡಿವೆ.
ಕನ್ನಡ ನಾಡು ಕಂಡ ಧೀಮಂತ ಪತ್ರಕರ್ತರಲ್ಲಿ ಬಸಪ್ಪ ಮಲ್ಲಪ್ಪ ಏಳುಕೋಟಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾರೆ. ಕನ್ನಡ ನಾಡಿನ ಅತ್ಯಂತ ಪ್ರಾಮಾಣಿಕ ಬದ್ಧತೆಯ ಲೋಕ ವಿರೋಧಿ ನಿಲುವಿನ ಬ.ಮ.ಏಳುಕೋಟಿ ಅವರು ಏಳುಕೋಟಿ ಎಂದೇ ಖ್ಯಾತಿ ಪಡೆದವರು. ತಮ್ಮ ಅತೀವ ಸ್ವಾಭಿಮಾನ, ಸ್ವಂತಿಕೆಗಳಿಂದ ಬದುಕಿ ಬಾಳಿದವರು. ಬಡತನ ಹಾಸಿಕೊಂಡು ಬಿದ್ದಿದ್ದರೂ ಸುಖದ ಆಸೆಗಾಗಿ ಮೋಸ-ವಂಚನೆ, ಆಸೆ ಆಮಿಷಗಳಿಗೆ ಬಲಿಯಾಗದ ಪ್ರಾಮಾಣಿಕ ಪತ್ರಕರ್ತ ಇದ್ದರೆ ಅದು ಏಳುಕೋಟಿ ಎಂದು ಎದೆ ತಟ್ಟಿ ಹೇಳುವಷ್ಟು ಇವರು ಖ್ಯಾತಿ ಪಡೆದವರು.
ಏಳುಕೋಟಿಯವರಂತಹ ಮಹನೀಯರು ನಮ್ಮ ಸಮಾಜದ ಶ್ರೇಯಸ್ಸಿಗಾಗಿ ಹಗಲಿರಲು ಶ್ರಮಿಸಿದವರು. ತಾವು ಕಂಡ ಕನಸು ನನಸಾಗಿಸಲು ನಂಬಿಕೆಯನ್ನು ಜಾರಿಗೆ ತರಲು ಅವರು ಪತ್ರಿಕಾ ಮಾಧ್ಯಮಕ್ಕೆ ಬಂದರು ಎನ್ನುವ ರಹಸ್ಯ ಬಹುತೇಕರಿಗೆ ಗೊತ್ತಿಲ್ಲ. ಬಡವರ ಬಗೆಗಿನ ಅವರ ಅಪರಿಮಿತ ಕಳಕಳಿ ಹಾಗೂ ಸಮಾನತೆಯ ಕನಸಿನ ಕಾರಣವಾಗಿ “ಜನಜೀವಾಳ” ಎಂಬ ಪತ್ರಿಕೆಯನ್ನು ಹುಟ್ಟು ಹಾಕಿದರು. ಜನ ಸಮುದಾಯಕ್ಕೆ ಏನೆಲ್ಲಾ ಬೇಕೋ ಅದನ್ನು ನೀಡುವ ಪ್ರಯತ್ನವನ್ನು ಮಾಡಿದವರು. ಅವರ ಬದುಕು-ಬರಹಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ. ಇಂದಿಗೂ ಅವರ ಬರಹಗಳನ್ನು ಸಮಾಜ ಆಗಾಗ ನೆನಪು ಮಾಡಿಕೊಳ್ಳುವಷ್ಟು ಅವರ ಬರಹ ಪ್ರಸಿದ್ಧಿ ಪಡೆದಿವೆ. ಏಳುಕೋಟಿ ಅವರ ಜೀವನವೇ ಒಂದು ಸಾಹಸಗಾಥೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಹಲವು ಕಾರಣಗಳಿಂದ ಸುಪ್ರಸಿದ್ಧವಾದ ಗ್ರಾಮ. ಕರ್ನಾಟಕದ ದೇವರು, ಮಹಾರಾಷ್ಟ್ರದ ಕುಲದೇವರಾದ ಮೈಲಾರಲಿಂಗನ ಸುಪ್ರಸಿದ್ಧ ದೇವಸ್ಥಾನ ಇಲ್ಲಿದೆ. 12 ನೇ ಶತಮಾನದ ಮಹಾಶರಣ ಮಡಿವಾಳ ಮಾಚಿದೇವರ ಹುಟ್ಟೂರು ಎಂಬ ಕೀರ್ತಿ ಈ ಗ್ರಾಮಕ್ಕಿದೆ. ಹಿಪ್ಪರಗಿ ಗ್ರಾಮದ ಏಳುಕೋಟಿ ಮನೆತನ ಮೈಲಾರ ದೇವರಿಗೆ ಒಕ್ಕಲು ಆಗಿರಬಹುದು. ಮೈಲಾರದೇವರ ಜಾತ್ರೆಯಲ್ಲಿ ಏಳುಕೋಟಿ..ಏಳು ಕೋಟಿ..ಮೈಲಾರಲಿಂಗ ಎಂಬ ಘೋಷಣೆ ಕೇಳಿ ಬರುತ್ತದೆ. ದೇವರ ಘೋಷಣೆಯ ಏಳುಕೋಟಿ ಇವರ ಮನೆತನದ ಹೆಸರಾಗಿದ್ದು ಮೈಲಾರದೇವರ ಭಕ್ತರಾಗಿದ್ದೆ ಕಾರಣವಿರಬಹುದು ಎಂದು ಈ ಮನೆತನದವರು ಭಾವಿಸಿದ್ದಾರೆ.
ಆಧುನಿಕ ಯುಗದಲ್ಲಿ ಹಿಪ್ಪರಗಿ ತುಂಬಾ ಪ್ರಸಿದ್ಧಿ ಪಡೆದ ಊರು. ಪತ್ರಿಕಾರಂಗದ ಭೀಷ್ಮ ಎಂದೇ ಖ್ಯಾತರಾದ ಮೊಹರೆ ಹನುಮಂತರಾಯರು ಹಿಪ್ಪರಗಿ ಗ್ರಾಮದವರು. ಹನುಮಂತರಾಯರಂತೆ ಇನ್ನೊಬ್ಬ ಧೀಮಂತ ಪತ್ರಕರ್ತ ಬಸಪ್ಪ ಮಲ್ಲಪ್ಪ ಏಳುಕೋಟಿ ಅವರ ಜನ್ಮ ಗ್ರಾಮವು ದೇವರ ಹಿಪ್ಪರಗಿ. ಒಂದೇ ಊರಿನಲ್ಲಿ ಈ ನಾಡು ಕಂಡ ಶ್ರೇಷ್ಠ ಪತ್ರಿಕೋದ್ಯಮಿಗಳು ಜನ್ಮ ತಾಳಿದ್ದು ಯೋಗಾಯೋಗವೇ ಸರಿ. ಹನುಮಂತ ರಾಯರು ಸದಾ ಒಂದು ಮಾತು ಹೇಳುತ್ತಿದ್ದರು. ವಿಜಯಪುರ ಜಿಲ್ಲೆಯ ಜನ ಮೆಣಸಿನ ತರುವು ಇದ್ದಂತೆ. ಈ ಸಸಿಗಳನ್ನು ಕಿತ್ತು ಬೇರೆ ಹಚ್ಚಿದಾಗಲೇ ಅವು ಬೆಳೆಯುತ್ತವೆ. ಈ ಮಾತಿಗೆ ನಿದರ್ಶನ ಅವರು ತಮ್ಮ ಮೊಟ್ಟ ಮೊದಲ ಕನ್ನಡ ಪತ್ರಿಕೆ ಸಂಯುಕ್ತ ಕರ್ನಾಟಕ ಪ್ರಾರಂಭ ಮಾಡಿದ್ದು ಬೆಳಗಾವಿಯಲ್ಲಿ. ಬ.ಮ. ಏಳುಕೋಟಿ ಅವರು ಜನಜೀವಾಳ ವಾರಪತ್ರಿಕೆ ಪ್ರಾರಂಭ ಮಾಡಿದ್ದು ಬೆಳಗಾವಿಯಲ್ಲೇ ಎಂಬುದು ವಿಶೇಷ. ಇಬ್ಬರೂ ಪತ್ರಿಕಾ ರಂಗಕ್ಕೆ ಅನನ್ಯವಾದ ಕೊಡುಗೆ ನೀಡಿದವರು. ಪತ್ರಿಕಾ ಭಾಷೆಗೆ ಒಂದು ಸತ್ವ ಹಾಗೂ ಶಕ್ತಿಯನ್ನು ತುಂಬಿದವರು ಮೊಹರೆ ಮತ್ತು ಏಳುಕೋಟಿ ಅವರು. ಆಧುನಿಕ ಪತ್ರಿಕಾಲೋಕಕ್ಕೆ ಕೊಟ್ಟ ಕೊಡುಗೆ ಸ್ಮರಣೀಯ. ಉನ್ನತ ವ್ಯಾಸಂಗ ಪಡೆದ ಏಳುಕೋಟಿ ಅವರು ಮನಸ್ಸು ಮಾಡಿದ್ದರೆ ಅಂದಿನ ಕಾಲದಲ್ಲೇ ಲಕ್ಷಾಧೀಶರಾಗುವ ಯೋಗ ಅವರಿಗಿತ್ತು. ಬೆನ್ನ ಹಿಂದೆ ಮಾವ ವೈಜಪ್ಪ ಅನಿಗೋಳ ಅವರಿದ್ದರು. ಆದರೆ, ಶರಣ ಸಿದ್ದಾಂತ, ಸೌಮ್ಯವಾದಗಳನ್ನು ಅಳವಡಿಸಿಕೊಂಡಿದ್ದ ಏಳುಕೋಟಿ ಸ್ವತಂತ್ರವಾಗಿ ಬದುಕಲು ಅಪೇಕ್ಷೆ ಪಟ್ಟರು. ಮೊದಲಿನಿಂದಲೂ ಸ್ವತಂತ್ರ ಪತ್ರಿಕೋದ್ಯಮದಲ್ಲಿ ನಂಬಿಕೆ ಇಟ್ಟು ಬಂದ ಏಳುಕೋಟಿ ಬ್ಯಾಂಕಿನ ಮ್ಯಾನೇಜರ್ ಹುದ್ದೆಯಲ್ಲಿದ್ದಾಗಲೇ 1948ರ ಏಪ್ರಿಲ್ 1 ರಂದು ಜನಜೀವಾಳ ಎಂಬ ಕನ್ನಡ ನಾಡಿನ ಅಪರೂಪದಲ್ಲೇ ಅಪರೂಪದ ಪತ್ರಿಕೆಯನ್ನು ಪ್ರಾರಂಭಿಸಿದರು. ಪತ್ರಿಕೆ ಮತ್ತು ನೌಕರಿ ಒಟ್ಟಾಗಿ ನಿಭಾಯಿಸುವುದು ಕಷ್ಟವೆಂದು ಅರಿತುಕೊಂಡ ಅವರು ಉದ್ಯೋಗಕ್ಕೆ ರಾಜೀನಾಮೆ ನೀಡಿ ಪತ್ರಿಕೆಯನ್ನು ಅವಲಂಬಿಸಿದರು. ಬಡತನದ ಬಾಳಿನಲ್ಲಿಯೂ ಅವರು ಧ್ಯೇಯನಿಷ್ಠ ಪತ್ರಿಕೆಗಾಗಿ ಪರಿತಪಿಸಿದರು. ಯಾವುದಕ್ಕೂ ಆಸೆ ಪಡಲಿಲ್ಲ. ಕುಟುಂಬವನ್ನು ಮುನ್ನೆಡೆಸಿದರು. ಆಗಿನ ಕಾಲದಲ್ಲೇ ಬಿ.ಎ. ಪದವೀಧರರಾದ ಏಳುಕೋಟಿ ಬೆಳಗ್ಗೆ ಮೂರು ಗಂಟೆಗೆ ಏಳುತ್ತಿದ್ದರು. ಕನ್ನಡ ಮತ್ತು ಇಂಗ್ಲಿಷ್ ಗ್ರಂಥಗಳನ್ನು ಓದುತ್ತಿದ್ದರು. ಎಮ್ಮೆಯ ಗಂಜಲವನ್ನು ತಾವೇ ತೆಗೆಯುತ್ತಿದ್ದರು. ನಂತರ ಸ್ನಾನ. ಲಿಂಗಪೂಜೆ ಮಾಡಿಕೊಂಡು ಜನಜೀವಾಳ ಕಚೇರಿಗೆ ಬಂದು ಇಡೀ ದಿನ ಪತ್ರಿಕಾ ಕಚೇರಿಯಲ್ಲೇ ತಮ್ಮ ಕೈಂಕರ್ಯವನ್ನು ನಡೆಸುತ್ತಿದ್ದರು.
ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ದಿನ :
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ ನಮ್ಮ ಜನ ನಿದ್ದೆಗೆಯ್ಯುತ್ತಲೇ ಇದ್ದರು. ಸ್ವಾತಂತ್ರ್ಯದ ಪರಿಣಾಮವಾಗಿ ತನ್ನ ಮೇಲೆ ಬಿದ್ದ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಹೊಣೆಗಾರಿಕೆಯನ್ನು ಜನತೆ ಹುರುಪಿನಿಂದ ಹೆಚ್ಚೆಚ್ಚು ಗಾಂಭೀರ್ಯದಿಂದ ನೆರವೇರಿಸುವಂತೆ ಮಾಡುವ ನಿಟ್ಟಿನಲ್ಲಿ ಒಂದು ಪರಿಣಾಮಕಾರಿ ಪತ್ರಿಕೆ ಅವಶ್ಯವೆಂದು ನಂಬಿದ
ಏಳುಕೋಟಿಯವರು ಬೆಳಗಾವಿ ಜಿಲ್ಲೆ ಒಳಗೊಂಡಂತೆ ಸಮಗ್ರ ಕರ್ನಾಟಕದ ಬೌದ್ಧಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ದೃಷ್ಟಿಯಿಂದ ವಾರಪತ್ರಿಕೆ ಪ್ರಕಟಿಸಬೇಕೆಂದು ನಿರ್ಧರಿಸಿದರು. ಅನ್ನ, ಆಸರೆ, ಅರಿವೇ, ಆರೋಗ್ಯ ಮತ್ತು ಅರಿವು ಈ ಐದು ವಸ್ತುಗಳು ಜನತೆಯ ಸಾರ ಸರ್ವಸ್ವ ಎಂದು ಅರಿದು ಇವುಗಳ ಪ್ರತಿಪಾದನೆಯ ಅನುಷ್ಠಾನಕ್ಕಾಗಿ ಪತ್ರಿಕೆಯನ್ನು ಮೀಸಲು ಇಡಬೇಕೆಂದು ನಿರ್ಧರಿಸಿದರು. 30-4- 1948 ರಂದು ಜನಜೀವಾಳ ಮೊದಲ ಸಂಚಿಕೆ ಪ್ರಕಟಗೊಂಡಿತು. ಅದರಲ್ಲಿ ಬ.ಮ.ಏಳುಕೋಟಿ ಅವರು ಪತ್ರಿಕೆಯ ಸಂಪಾದಕೀಯದಲ್ಲಿ ಈ ಐದು ಜನ ಜೀವಾಳದ ಗುರಿ ಕನ್ನಡಿಯನ್ನು ಸುಂದರವಾಗಿ ಬಿಚ್ಚಿಟ್ಟಿದ್ದಾರೆ. ಜನಜೀವಾಳದ ವಿಚಾರ ಸರಣಿ ಹಾಗೂ ಬರವಣಿಗೆ ಅತ್ಯಲ್ಪ ಅವಧಿಯಲ್ಲಿ ಜನಸಾಮಾನ್ಯರನ್ನು ಮೋಡಿ ಮಾಡಿತು. ಅವರ ಬರಹ ಜನರಿಗೆ ತುಂಬಾ ಹಿಡಿಸಿತು. ಏಳುಕೋಟಿ ಅವರ ಚಿತ್ತಾಕರ್ಷಕ ಶೈಲಿ ಜನರಲ್ಲಿ ಕಾತುರತೆಯನ್ನು ಉಂಟು ಮಾಡಿತು. ಅವರ ಸರಳತೆಯ ಬರವಣಿಗೆ ಹಾಗೂ ನೇರ ನಿರ್ಭಿತ, ಹರಿತ ಶೈಲಿಯ ಬರವಣಿಗೆಯಿಂದಾಗಿ ಜನಜೀವಾಳ ಕನ್ನಡ ಜನತೆಯಲ್ಲಿ ಜೀವಾಳವಾಗಿ ಹೊರಹೊಮ್ಮಿತು. ಪಕ್ಷಾತೀತವಾದ ಅವರ ಧೋರಣೆ ಜನರಲ್ಲಿ ಚಿಂತನೆ ಉಂಟು ಮಾಡಲು ಹಚ್ಚಿದ್ದು ಸಮಾಜದಲ್ಲಿ ಕಂಡುಬರುವ ದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ಅವರ ಮನೋಧರ್ಮ ಜನರಿಗೆ ಅತ್ಯಂತ ಆಪ್ತವಾಯಿತು. ಈ ನಡುವೆ ಜನಜೀವಾಳ ಪತ್ರಿಕೆ ತನ್ನ ಏಳೂವರೆ ದಶಕಗಳ ಏಳು ಬೀಳಿನಲ್ಲಿ ಸಾಕಷ್ಟು ಕಷ್ಟನಷ್ಟ ಅನುಭವಿಸಿತು.
ಜನಜೀವಾಳದ ಇಡೀ ಪರಿವಾರವೇ ಪತ್ರಿಕೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿತು. ಮೊಳೆ ಜೋಡಿಸುವ ವಿಧಾನವನ್ನು ತಾವೇ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿದರು. ಇದರಿಂದ ಅಕ್ಷರ ಜೋಡಿಸುವ ತೊಂದರೆ ತಪ್ಪಿತು. ಏಳುಕೋಟಿಯವರು ಛಲದಂಕ ಮಲ್ಲ. ತಾವು ಏನು ಸಾಧಿಸಬೇಕು ಎನ್ನುವುದು ಅದನ್ನು ಸಾಧಿಸಿಯೇ ತೀರುವ ವ್ಯಕ್ತಿ. ಬೆಳಗಾವಿಗೆ ಯಾರೇ ಬರಲಿ. ಅವರನ್ನು ಜನಸಾಮಾನ್ಯರ ಪ್ರತಿನಿಧಿಯಾಗಿ ಮಾತನಾಡಿಸುವ ತಾಕತ್ತು ಇರುವ ಏಕೈಕ ನೇರ ಪತ್ರಕರ್ತ ಎಂದರೆ ಅದು ಏಳುಕೋಟಿ. ಸಾಮಾಜಿಕ ಕೆಲಸ ಕಾರ್ಯಗಳಾಗಿ ಜನಜೀವಾಳ ಪತ್ರಿಕೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡ ಅವರು ಎಲ್ಲಾ ಲೋಪ ದೋಷಗಳನ್ನು ಎತ್ತಿ ತೋರಿಸಿ ಅಧಿಕಾರಿಗಳ ಅಜ್ಞಾನ ರಾಜಕಾರಣಿಗಳ ಬೇಜವಾಬ್ದಾರಿ, ಶಿಕ್ಷಕರ ಕರ್ತವ್ಯಲೋಪ ಮುಂತಾದವುಗಳನ್ನು ಕುರಿತು ನಿಷ್ಠುರವಾಗಿ ಬರೆಯುತ್ತಿದ್ದರು. ಜನಜೀವಾಳದಂತಹ ಸಣ್ಣ ಪತ್ರಿಕೆ ಸಮಾಜದಲ್ಲಿ ಅತ್ಯಂತ ದೊಡ್ಡ ಬದಲಾವಣೆ ಹಾಗೂ ಪರಿಣಾಮಕಾರಿ ಆಗಿ ಬೆಳೆದಿರುವುದು ಬಹು ದೊಡ್ಡ ಹೆಮ್ಮೆಯ ಸಂಗತಿ.
ಜನಜೀವಾಳ ಪತ್ರಿಕೆ ತನ್ನ ನಿರ್ಭೀತ ಬರಹ, ಧೋರಣೆಯಿಂದ ಕನ್ನಡ ನಾಡಿನಾದ್ಯಂತ ಅಪಾರ ಜನ ಮನ್ನಣೆಯನ್ನು ಪಡೆದುಕೊಂಡಿದೆ. ಸಮಾಜದಲ್ಲಿ ಒಂದು ಜಾಗೃತ ಪ್ರಜ್ಞೆಯನ್ನು ಹೊಂದಿರುವ ಏಕಮೇವ ಪತ್ರಿಕೆಯಾಗಿ ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಗಮನಾರ್ಹ ಸಂಗತಿ ಎನ್ನಬಹುದು.